ಬೆಂಗಳೂರು (ಫೆ. 21):  ಬಡವರಿಗಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ ಊಟ ಬಿಬಿಎಂಪಿ ಸದಸ್ಯರಿಗೆ ರುಚಿಸುತ್ತಿಲ್ಲ ಎಂಬುದು ಇದೀಗ ಸ್ಪಷ್ಟ​ಗೊಂಡಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಹಾಗೂ ಇಂದಿರಾ ಕ್ಯಾಂಟೀನ್‌ ಆಹಾರದ ಗುಣಮಟ್ಟಬಿಂಬಿ​ಸಲು ಕೌನ್ಸಿಲ್‌ ಸಭೆ ವೇಳೆ ಎಲ್ಲ ಸದಸ್ಯರಿಗೂ ಇಂದಿರಾ ಕ್ಯಾಂಟೀನ್‌ ಊಟವನ್ನೇ ಪೂರೈಸಲು ಮುಂದಾಗಿದ್ದ ಬಿಬಿಎಂಪಿ, ಇದೀಗ ತಕ್ಷಣ ಇದಕ್ಕೆ ಇತಿಶ್ರೀ ಹಾಡಿದೆ.

ಬಜೆಟ್‌ ಮೇಲಿನ ಚರ್ಚೆಗಾಗಿ  ಆರಂಭವಾದ ಕೌನ್ಸಿಲ್‌ ಸಭೆಯಲ್ಲಿ ಸದಸ್ಯರಿಗೆ ಇಂದಿರಾ ಕ್ಯಾಂಟೀನ್‌ ಊಟ ಬರಲಿಲ್ಲ. ಬದಲಿಗೆ ಖಾಸಗಿ ಹೋಟೆಲ್‌ನಿಂದ ಮಾಂಸಾಹಾರಿ ಮತ್ತು ಸಸ್ಯಾಹಾರಿ ಊಟ ತರಿಸಲಾಗಿತ್ತು. ಈ ಬಾರಿಯ ಬಜೆಟ್‌ ಮಂಡಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಈ ಊಟದ ವ್ಯವಸ್ಥೆ ಮಾಡಿದ್ದರು.

ಮೂಲಗಳ ಪ್ರಕಾರ ಇಂದಿನ ಸಭೆಗೆ ನೂತನ ಆಡಳಿತದ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಊಟದ ವ್ಯವಸ್ಥೆ ಮಾಡಲಿದ್ದಾರೆ. ಅದೇ ರೀತಿ, 3 ನೇ ದಿನದ ಸಭೆಯಲ್ಲಿ ಸ್ವತಃ ಮೇಯರ್‌ ಅಥವಾ ಉಪ​ಮೇ​ಯರ್‌ ಊಟ ಆಯೋಜಿಸಲಿದ್ದಾರೆ.

ಕೌನ್ಸಿಲ್‌ ಸಭೆ ವೇಳೆ ಸದಸ್ಯರಿಗೂ ಇಂದಿರಾ ಕ್ಯಾಂಟೀನ್‌ ಊಟ ಆರಂಭಿಸಲಾಗಿತ್ತು. ಇದಕ್ಕೆ ಹಲವು ಸದಸ್ಯರು ಪರೋಕ್ಷವಾಗಿ, ಕೆಲವರು ನೇರವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ಹೋಟೆಲ್‌ನಿಂದ ಊಟ ತರಿಸಿಕೊಂಡು ಸ್ಥಾಯಿ ಸಮಿತಿ ಕಚೇರಿಗಳಲ್ಲಿ ಕೂತು ಊಟ ಮಾಡಿದ್ದೂ ಉಂಟು.

ತಿಂಗಳಿಗೆ ಒಂದೆರಡು ಕೌನ್ಸಿಲ್‌ ಸಭೆಗಳು ನಡೆಯುತ್ತದೆ. ಒಂದೊಂದು ಸಭೆಗೆ ಪ್ರತಿ ಸ್ಥಾಯಿ ಸಮಿತಿಯಿಂದ ಊಟದ ವ್ಯವಸ್ಥೆ ಮಾಡಲಿ ಎಂಬ ಬೇಡಿಕೆಯನ್ನು ಸದ​ಸ್ಯರು ಮೇಯರ್‌ ಮುಂದಿಟ್ಟರು ಎಂದು ಹೇಳ​ಲಾ​ಗಿ​ದೆ.

ಆದರೆ, ಕಾಂಗ್ರೆಸ್‌ ಸರ್ಕಾರ ಆರಂಭಿಸಿದ ಇಂದಿರಾ ಕ್ಯಾಂಟೀನ್‌ ಊಟವನ್ನು ನಮ್ಮ ಪಕ್ಷದ ಸದಸ್ಯರೇ ತಿರಸ್ಕರಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಾರ​ಣಕ್ಕೆ ಮೇಯರ್‌ ಗಂಗಾಂ​ಬಿಕೆ ಈ ಬೇಡಿ​ಕೆಗೆ ಒಪ್ಪಿಗೆ ನೀಡಿ​ರ​ಲಿಲ್ಲ. ಇಂದಿರಾ ಕ್ಯಾಂಟೀನ್‌ ಊಟ​ವನ್ನು ಪೂರೈಕೆ ನಿಲ್ಲಿ​ಸು​ವು​ದಿಲ್ಲ ಎಂದು ಸ್ಪಷ್ಟ​ವಾಗಿ ತಿಳಿ​ಸಿ​ದ್ದರು. ಹೀಗಾಗಿ ಪಾಲಿಕೆ ಸಭೆ ನಡೆ​ಯು​ವಾಗ 12 ಸ್ಥಾಯಿ ಸಮಿತಿ ಅಧ್ಯಕ್ಷರು ಸರ​ದಿ​ಯಂತೆ ಊಟದ ವ್ಯವಸ್ಥೆ ಮಾಡಲು ಒತ್ತಡವನ್ನು ಪಾಲಿಕೆ ಸದ​ಸ್ಯರು ತಂದಿದ್ದು, ಅದು ಈ ಸಭೆ​ಯಿಂದ ಚಾಲ್ತಿಗೆ ಬಂದಿದೆ ಎಂದು ಮೂಲಗಳು ಹೇಳಿ​ವೆ.