ಸಚಿವ ಸಂಪುಟ ವಿಸ್ತರಣೆ : ಜೆಡಿಎಸ್‌ನಲ್ಲಿ ಅಸಮಾಧಾನ ಸ್ಫೋಟ

Basavaraj horatti Unhappy with JDS highcommand
Highlights

ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಇದೀಗ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಜೆಡಿಎಸ್ ವರಿಷ್ಠರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು(ಜೂನ್.5: ಮೈತ್ರಿ ಸರ್ಕಾರದ ಸಚಿವ ಸಂಪುಟ ಸರ್ಕಸ್ ಮುಂದುವರಿಯುತ್ತಿದ್ದಂತೆ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಆಪ್ತರಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಇಷ್ಟು ವರ್ಷ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ. ಆದರೆ ನಿಷ್ಠೆ ಜೆಡಿಎಸ್‌ಗೆ ಬೇಕಾಗಿಲ್ಲ. ಇದಕ್ಕಾಗಿಯೇ ನನ್ನನ್ನ ದೂರ ಮಾಡಿದ್ದಾರೆ ಎಂದು ಹೊರಟ್ಟಿ ಹೇಳಿದ್ದಾರೆ.

ಜೆಡಿಎಸ್‌ನ ಲಿಂಗಾಯಿತ ಸಮುದಾಯದ ಪ್ರಮುಖ ನಾಯಕನಾಗಿರುವ ಬಸವರಾಜ್ ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಜೆಡಿಎಸ್ ಮುಂದಾಗಿದೆ. ಇದರಿಂದ ಮತ್ತಷ್ಟು ಕುಪಿತಗೊಂಡಿರುವ ಹೊರಟ್ಟಿ, ಸಚಿವ ಸ್ಥಾನವೂ ಬೇಡ, ಸಭಾಪತಿ ಸ್ಥಾನವೂ ಬೇಡ ಎಂದು ತಿರುಗೇಟು ನೀಡಿದ್ದಾರೆ.

ಸಚಿವ ಸ್ಥಾನ ನೀಡದೇ ಮನವೊಲಿಕೆಗಾಗಿ ಇದೀಗ ಸಭಾಪತಿ ಸ್ಥಾನ ನೀಡೋದು ಬೇಡ. ನಾನು ಸಚಿವ ಸ್ಥಾನದ ಬೆನ್ನುಬಿದ್ದಿಲ್ಲ ಎಂದು ಹೊರಟ್ಟಿ ತಮ್ಮ ಆಕ್ರೋಷ ಹೊರಹಾಕಿದ್ದಾರೆ. ಜೆಡಿಎಸ್ ಯಾರನ್ನೂ ಬೇಕಾದರೂ ಸಚಿವರನ್ನಾಗಿ ಮಾಡಲಿ. ನನ್ನ ಅಭ್ಯಂತರವಿಲ್ಲ. ಯಾವುದೇ ಮಾನದಂಡದ ಅಡಿಯಲ್ಲೂ ಸಚಿವ ಸ್ಥಾನ ಹಂಚಿಕೆ ಮಾಡಿಕೊಳ್ಳಲಿ ಎಂದು ಹೊರಟ್ಟಿ ನೋವನ್ನ ತೋಡಿಕೊಂಡಿದ್ದಾರೆ.

ಜಿಡಿಎಸ್ ಹಾಗೂ ಕಾಂಗ್ರೆಸ್ ಸಚಿವ ಸ್ಥಾನ ಹಂಚಿಕೆ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಎರಡು ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಇಷ್ಟೇ ಅಲ್ಲ ಸ್ಥಾನಕ್ಕಾಗಿ ಬಾರಿ ಲಾಭಿ ಕೂಡ ನಡೆಯುತ್ತಿದೆ.
 

loader