ಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸದಸ್ಯರ ಬಲ ಸಭಾಪತಿ ಸ್ಥಾನ ಬೇಕೆಂದು ಸಿದ್ದು ಪಟ್ಟುಎಸ್‌.ಆರ್‌.ಪಾಟೀಲ್‌ ಪರ ಲಾಬಿಸಭಾಪತಿ ಮಾಡಲೆಂದೇ ಹೊರಟ್ಟಿಅವರಿಗೆ ಸಚಿವ ಸ್ಥಾನ ನೀಡದೆ ಇದ್ದ ಜೆಡಿಎಸ್‌ ವರಿಷ್ಠರುಸದನದ ಹಿರಿಯ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಹಂಗಾಮಿ ವಿಧಾನ ಪರಿಷತ್‌ ಸಭಾಪತಿ 

ಬೆಂಗಳೂರು (ಜು. 03): ಮೇಲ್ಮನೆಯಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿಅವರಿಗೆ ಅತ್ತ ಸಚಿವ ಸ್ಥಾನವೂ ಇಲ್ಲದೆ ಇತ್ತ ಸಭಾಪತಿ ಸ್ಥಾನವೂ ಇಲ್ಲದಂತಾಗುತ್ತಾರೆಯೇ ಎಂಬ ಅನುಮಾನ ಮೂಡಿದೆ.

ಹೊರಟ್ಟಿಅವರನ್ನು ಪರಿಷತ್ತಿನ ಸಭಾಪತಿಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದಲೇ ಜೆಡಿಎಸ್‌ ವರಿಷ್ಠರು ಅವರಿಗೆ ಸಚಿವ ಸ್ಥಾನ ನೀಡದೆ ದೂರ ಇರಿಸಿದರು. ಸಚಿವ ಸ್ಥಾನದ ಆಸೆಯಿದ್ದರೂ ಹೊರಟ್ಟಿಅವರು ಅನಿವಾರ್ಯವಾಗಿ ಸುಮ್ಮನಾಗಬೇಕಾಯಿತು. ಈ ನಡುವೆ ಹಿರಿಯ ಸದಸ್ಯರಾಗಿರುವ ಕಾರಣ ಹಂಗಾಮಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಕಾಯಂ ಸಭಾಪತಿಯಾಗುವುದಕ್ಕೆ ಕಾಂಗ್ರೆಸ್‌ ಬೆಂಬಲ ಬೇಕೇಬೇಕು.

ಆದರೆ, ಕಾಂಗ್ರೆಸ್ಸಿನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಎಸ್‌.ಆರ್‌.ಪಾಟೀಲ್‌ ಅವರನ್ನು ಪರಿಷತ್ತಿನ ಸಭಾಪತಿಯನ್ನಾಗಿ ಮಾಡಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ, ಅತಿಹೆಚ್ಚು ಸದಸ್ಯರನ್ನು ಹೊಂದಿರುವ ತಮ್ಮ ಪಕ್ಷಕ್ಕೇ ಸಭಾಪತಿ ಸ್ಥಾನ ನೀಡಬೇಕು ಎಂಬ ಪ್ರಸ್ತಾಪವನ್ನು ಭಾನುವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲೂ ಪ್ರಸ್ತಾಪಿಸಿದ್ದರು. ಈ ಬಗ್ಗೆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು ಎಂದು ತಿಳಿದುಬಂದಿದೆ.

ಇದೀಗ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆದು ಸಭಾಪತಿ ಸ್ಥಾನ ಯಾರ ಪಾಲಾಗಬೇಕು ಎಂಬುದು ಇತ್ಯರ್ಥವಾಗಬೇಕು. ಸಭಾಪತಿ ಸ್ಥಾನ ಕಾಂಗ್ರೆಸ್ಸಿಗೆ ದಕ್ಕಿದಲ್ಲಿ ಮುಖ್ಯ ಸಚೇತಕ ಸ್ಥಾನ ಜೆಡಿಎಸ್‌ಗೆ ಸಿಗಬಹುದು. ಒಂದು ವೇಳೆ ಸಭಾಪತಿ ಸ್ಥಾನ ಜೆಡಿಎಸ್‌ಗೇ ಬಿಟ್ಟುಕೊಟ್ಟಲ್ಲಿ ಸಚೇತಕ ಸ್ಥಾನ ಕಾಂಗ್ರೆಸ್‌ ಪಾಲಾಗಬಹುದು ಎನ್ನಲಾಗಿದೆ.

ಒಂದು ವೇಳೆ ಸಭಾಪತಿ ಸ್ಥಾನ ಜೆಡಿಎಸ್‌ಗೆ ಸಿಗದಿದ್ದಲ್ಲಿ ಹೊರಟ್ಟಿಅವರ ಸ್ಥಾನಮಾನ ಏನು ಎಂಬುದು ಪ್ರಶ್ನಾರ್ಥಕವಾಗಿದೆ. ಸದ್ಯಕ್ಕೆ ಜೆಡಿಎಸ್‌ ಪಾಲಿನ ಮಂತ್ರಿ ಸ್ಥಾನಗಳ ಪೈಕಿ ಒಂದು ಸ್ಥಾನ ಖಾಲಿ ಇದೆ. ವರಿಷ್ಠರು ನಿರ್ಧರಿಸಿದಲ್ಲಿ ಮಂತ್ರಿಯನ್ನಾಗಿಸಬಹುದು. ಇಲ್ಲದಿದ್ದಲ್ಲಿ ಕೇವಲ ಸದಸ್ಯರಾಗಿ ಮುಂದುವರೆಯಬೇಕಾಗಿ ಬರಬಹುದು ಎಂದು ಮೂಲಗಳು ತಿಳಿಸಿವೆ.