Asianet Suvarna News Asianet Suvarna News

ಬಸವನ ಬಾಗೇವಾಡಿ ರೈತರನ್ನು ವಂಚಿಸಿದ ರಾಜ್ಯಸರ್ಕಾರ; ಸಾಮೂಹಿಕ ಆತ್ಮಹತ್ಯೆಗೆ ರೈತರ ತೀರ್ಮಾನ

ನಮ್ಮ ಭೂಮಿ ಕೊಡಿ, ಇಲ್ಲವೇ ಪರಿಹಾರ ಕೊಡಿ, ಇಲ್ಲದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳೋಕೆ ಬಿಡಿ  - ಹೀಗೆ ನೋವು ಆಕ್ರೋಶದಿಂದ ರಾಜ್ಯ ಸರ್ಕಾರದ ವಿರುದ್ಧ  ಬಸವನ ಬಾಗೇವಾಡಿಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ರೈತರ ಭೂಮಿಯನ್ನೂ ವಶಪಡಿಸಿಕೊಂಡು, ಪರಿಹಾರವನ್ನೂ ನೀಡದೇ ಸಂಕಷ್ಟಕ್ಕೇ ದೂಡಿದೆ. 

Basavanabagevadi Farmers lost their land

ಬೆಂಗಳೂರು (ಫೆ. 27): ನಮ್ಮ ಭೂಮಿ ಕೊಡಿ, ಇಲ್ಲವೇ ಪರಿಹಾರ ಕೊಡಿ, ಇಲ್ಲದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳೋಕೆ ಬಿಡಿ  - ಹೀಗೆ ನೋವು ಆಕ್ರೋಶದಿಂದ ರಾಜ್ಯ ಸರ್ಕಾರದ ವಿರುದ್ಧ  ಬಸವನ ಬಾಗೇವಾಡಿಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ರೈತರ ಭೂಮಿಯನ್ನೂ ವಶಪಡಿಸಿಕೊಂಡು, ಪರಿಹಾರವನ್ನೂ ನೀಡದೇ ಸಂಕಷ್ಟಕ್ಕೇ ದೂಡಿದೆ. 

ಬಸವನ ಬಾಗೇವಾಡಿ ರೈತರ ಪಾಲಿಗೆ ಭೂಮಿಯೇ ಶಾಪವಾಗಿ ಮಾರ್ಪಟ್ಟಿದೆ. ಇಲ್ಲಿನ ರೈತರ ಬಳಿ ಬೇಕಾದಷ್ಟು ಜಮೀನಿದ್ದರೂ ಇಲ್ಲದಂತಾಗಿದೆ. 2007ರಲ್ಲಿ ಇಲ್ಲಿನ ತೆಲಗಿ ಹಾಗೂ ಅಂಡಲಗೇರಿ ಗ್ರಾಮದ ರೈತರ ಸುಮಾರು 130 ಎಕರೆ 5 ಗುಂಟೆ ಭೂಮಿಯನ್ನ ಈಗಿನ ಸ್ಥಳೀಯ ಶಾಸಕ ಶಿವಾನಂದ ಪಾಟೀಲ್ ಮಾಲೀಕತ್ವದ ಸಿದ್ದೇಶ್ವರ ಶುಗರ್ಸ್​ ಕಂಪನಿಗಾಗಿ ಕೆಐಎಡಿಬಿ ವಶಪಡಿಸಿಕೊಂಡಿದೆ.  ಕೇವಲ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಕೆಐಎಡಿಬಿ ಜಮೀನು ಸ್ವಾಧೀನ ಮಾಡಿಕೊಂಡಾಗ, ಡಿಸಿ ನೇತೃತ್ವದ ಸಮಿತಿ ಈ ಎಲ್ಲಾ ರೈತರಿಗೆ ಎಷ್ಟು ಪರಿಹಾರ ನೀಡಬೇಕು ಅಂತ ತೀರ್ಮಾನಿಸಬೇಕು ಅಂತಾಗಿತ್ತು. ಆದರೆ ಡಿಸಿ ನೇತೃತ್ವದ ಸಮಿತಿ ಸಭೆಯನ್ನೂ  ನಡೆಸಲಿಲ್ಲ, ಪರಿಹಾರ ಮೊತ್ತವನ್ನೂ ನಿಗದಿ ಮಾಡಲಿಲ್ಲ. ರೈತರಿಗೆ ಇತ್ತ ಪರಿಹಾರವೂ ಸಿಗಲಿಲ್ಲ, ಅತ್ತ ಭೂಮಿಯೂ ಕೈತಪ್ಪಿಹೋಯ್ತು.  

 ಈ ನಡುವೆ ಯಾವ ಸಿದ್ದೇಶ್ವರ ಶುಗರ್ಸ್ ಗಾಗಿ ಈ ಹೊಲಗಳನ್ನು ಸ್ವಾಧೀನ ಮಾಡಿಕೊಂಡಿದ್ದರೋ ಆ ಕಂಪನಿಯ ಲೈಸೆನ್ಸ್ ಕೂಡ ರದ್ದಾಗುವುದರೊಂದಿಗೆ ಅತ್ತ ಸಕ್ಕರೆ ಫ್ಯಾಕ್ಟರಿ ಕೂಡ ಬರಲಿಲ್ಲ, ಇತ್ತ ಜಮೀನು ಸಿಗಲಿಲ್ಲ, ಪರಿಹಾರದ ಮಾತಂತೂ ಇಲ್ಲವೇ ಇಲ್ಲ ಎಂಬಂತಾಗಿದೆ. 

ಇತ್ತೀಚಿಗೆ ತಹಸೀಲ್ದಾರರು ಈ ಎಲ್ಲ ರೈತರ 130 ಎಕರೆ ಭೂಮಿಯ ಪಹಣಿ ಪತ್ರದ ಮೇಲೆ ಕೆಐಎಡಿಬಿಗೆ ಸೇರಿದ ಜಮೀನು ಅಂತ ಮುದ್ರೆ ಹಾಕಲಾಗಿದೆ. ಇದರೊಂದಿಗೆ ರೈತರ ಜಮೀನು ಶಾಶ್ವತವಾಗಿ ಕೈತಪ್ಪಿ ಹೋದಂತಾಗಿದೆ. ಕಣ್ಣೀರಿನಲ್ಲೇ ಕೈತೊಳೆಯುತ್ತಿರುವ ಅನ್ನದಾತರು ನಮಗೆ ಹೊಲವನ್ನಾದರೂ ಕೂಡಿ, ಇಲ್ಲವೇ ಪರಿಹಾರವನ್ನಾದರೂ ಕೊಡಿ, ಇಲ್ಲದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂತ ಕಣ್ಣೀರಿಡುತ್ತಿದ್ದಾರೆ.

ಸುಪ್ರೀಂ ಕೋರ್ಟ್​ ನ ತೀರ್ಪಿನ ಪ್ರಕಾರ ಯಾವ ಯೋಜನೆಗಾಗಿ  ಜಮೀನು ಸ್ವಾಧೀನ ಮಾಡಿಕೊಂಡಿರುತ್ತಾರೋ ಆ ಯೋಜನೆ ಎರಡು ವರ್ಷದೊಳಗೆ ಜಾರಿಯಾಗದೇ ಹೋದರೆ ವಶಪಡಿಸಿಕೊಂಡ ಜಮೀನನ್ನು ಸ್ವಾಧೀನದಿಂದ ಕೈಬಿಡಬೇಕಾಗುತ್ತೆ. ಆದರೆ ರೈತ ಪರ ಸರ್ಕಾರ ಅಂತ ಹೇಳಿಕೊಳ್ಳುವ ರಾಜ್ಯ ಸರ್ಕಾರ ಮಾತ್ರ ಇಲ್ಲಿನ ರೈತರನ್ನ ಎಲ್ಲಾ ಯೋಜನೆಗಳಿಂದ ವಂಚಿತರನ್ನಾಗಿಸಿ, ರೈತರ ಬದುಕನ್ನ ಸಾವಿನ ಮಡುವಿಗೆ ತಳ್ಳಿದೆ. ಕೂಡಲೇ ಸರ್ಕಾರ ರೈತರಿಗೆ ಜಮೀನು ನೀಡುವ ಅಥವಾ ಪರಿಹಾರ ನೀಡುವ ಮೂಲಕ ರೈತರ ಕೈಹಿಡಿಯಬೇಕಿದೆ.

Follow Us:
Download App:
  • android
  • ios