ಯತ್ನಾಳ ಬಿಜೆಪಿ ಸೇರ್ಪಡೆ ಫೈನಲ್‌ ಆಗಿದ್ದು ಹೇಗೆ?

First Published 26, Mar 2018, 7:52 AM IST
Basanagouda Patil Ytan Join BJP
Highlights

ಪಕ್ಷ ತೊರೆದಿರುವ ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಗೆ ವಾಪಸ್‌ ಕರೆದುಕೊಳ್ಳಲು ಹಸಿರು ನಿಶಾನೆ ದೊರೆತಿದ್ದರೂ ಅದು ಸುಲಭವಾಗಿ ಸಿಕ್ಕಿಲ್ಲ.

ಬೆಂಗಳೂರು : ಪಕ್ಷ ತೊರೆದಿರುವ ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಗೆ ವಾಪಸ್‌ ಕರೆದುಕೊಳ್ಳಲು ಹಸಿರು ನಿಶಾನೆ ದೊರೆತಿದ್ದರೂ ಅದು ಸುಲಭವಾಗಿ ಸಿಕ್ಕಿಲ್ಲ.

ಯತ್ನಾಳ ಮರುಸೇರ್ಪಡೆ ಯಾಕೆ ಬೇಡ ಎಂಬ ತಮ್ಮ ವಾದ ಪುಷ್ಟೀಕರಿಸಲು ಪಕ್ಷದ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿ ಅವರು ರಾಷ್ಟ್ರೀಯ ನಾಯಕರ ಬಳಿ ಹಲವು ಕಡತಗಳನ್ನೇ ಮುಂದಿಟ್ಟು ವಾದ ಮಂಡನೆಗೆ ಯತ್ನಿಸಿದ್ದರು. ಅಂತಿಮವಾಗಿ ಶೆಟ್ಟರ್‌-ಜೋಶಿ ಅವರನ್ನು ಒಪ್ಪಿಸುವುದರ ಜೊತೆಗೆ ಯತ್ನಾಳ ಅವರಿಗೆ ಇನ್ನು ಮುಂದೆ ಪಕ್ಷದ ನಾಯಕರನ್ನು ಘಾಸಿಗೊಳಿಸುವ ಹೇಳಿಕೆಗಳನ್ನು ನೀಡದಂತೆ ತಾಕೀತನ್ನೂ ರಾಷ್ಟ್ರೀಯ ನಾಯಕರು ಮಾಡುವ ಮೂಲಕ ಸೇರ್ಪಡೆಗೆ ಹಾದಿ ಸುಗಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಿವಾಸದಲ್ಲಿ ನಡೆದ ಮಾತುಕತೆಗೆ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಹಾಗೂ ಪಕ್ಷದ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಯತ್ನಾಳ ಅವರೊಂದಿಗೆ ಅವರನ್ನು ವಿರೋಧಿಸಿಕೊಂಡು ಬಂದಿದ್ದ ಶೆಟ್ಟರ್‌ ಮತ್ತು ಜೋಶಿ ಅವರನ್ನೂ ಆಹ್ವಾನಿಸಲಾಗಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚನೆಯಂತೆ ಯತ್ನಾಳ ಮತ್ತು ಶೆಟ್ಟರ್‌-ಜೋಶಿ ಅವರ ನಡುವೆ ರಾಜಿ ಸಂಧಾನ ನಡೆಸಿ ಸುಖಾಂತ್ಯ ಕಾಣಿಸಬೇಕು ಎಂಬುದೇ ಈ ಮಾತುಕತೆಯ ಉದ್ದೇಶವಾಗಿತ್ತು.

ಈ ರಾಜಿ ಸಂಧಾನ ವೇಳೆ ಶೆಟ್ಟರ್‌ ಮತ್ತು ಜೋಶಿ ಅವರಿಬ್ಬರೂ ಯತ್ನಾಳ ತಮ್ಮ ವಿರುದ್ಧ ಇದುವರೆಗೆ ನೀಡಿದ ಹೇಳಿಕೆಗಳ ಬಗ್ಗೆ ಪತ್ರಿಕಾ ತುಣುಕುಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿನ ಪ್ರಸಾರದ ಸೀಡಿಯನ್ನೂ ರಾಷ್ಟ್ರೀಯ ನಾಯಕರ ಮುಂದಿಟ್ಟರು. ಆದರೆ, ಇವುಗಳ ಮೇಲೆ ಕಣ್ಣಾಡಿಸಿದ ರಾಷ್ಟ್ರೀಯ ನಾಯಕರು ಅದೆಲ್ಲವೂ ತಮಗೆ ಗೊತ್ತಿದೆ. ಅದನ್ನು ಮರೆತು ಈಗ ರಾಜಿ ಮಾಡಿಕೊಳ್ಳಬೇಕು ಎಂಬ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.

ಸುಮಾರು ಎರಡು ಗಂಟೆಗಳ ಕಾಲ ನಡೆದ ಮಾತುಕತೆ ವೇಳೆ ಸಣ್ಣ ಮಟ್ಟದಲ್ಲಿ ಆರೋಪ-ಪ್ರತ್ಯಾರೋಪ, ವಾದ-ಪ್ರತಿ ವಾದವೂ ನಡೆದಿದೆ. ಇದೆಲ್ಲವೂ ತೀವ್ರಗೊಳ್ಳುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಮುರಳೀಧರರಾವ್‌ ಮತ್ತು ಜಾವಡೇಕರ್‌, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಯತ್ನಾಳ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಇದು ಮಹತ್ವದ ಚುನಾವಣೆ ಆಗಿರುವುದರಿಂದ ಹಿಂದೆ ಆಗಿರುವುದನ್ನು ಮರೆಯಬೇಕು. ಒಬ್ಬರಿಗೊಬ್ಬರು ಅನುಸರಿಸಿಕೊಂಡು ಪಕ್ಷದ ಸಂಘಟನೆ ಬಲಗೊಳಿಸಲು ಶ್ರಮಿಸಬೇಕು ಎಂಬ ಸ್ಪಷ್ಟಸಂದೇಶ ರವಾನಿಸಿದರು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಯತ್ನಾಳ ಅವರು ಉತ್ತರ ಕರ್ನಾಟಕದ ಸಂಘ ಪರಿವಾರದ ಮುಖಂಡರೊಂದಿಗೂ ವಿರಸ ಕಟ್ಟಿಕೊಂಡಿದ್ದಾರೆ. ಅವರೆಲ್ಲರನ್ನೂ ಭೇಟಿಯಾಗಿ ಕ್ಷಮೆ ಕೇಳಬೇಕು ಎಂಬ ಆಗ್ರಹವನ್ನೂ ಶೆಟ್ಟರ್‌ ಮತ್ತು ಜೋಶಿ ಅವರು ಸಭೆಯಲ್ಲಿ ಇಟ್ಟರು. ಆದರೆ, ಯತ್ನಾಳ ಅವರು ಇದಕ್ಕೆ ಒಪ್ಪಲಿಲ್ಲ. ಇದೇ ವೇಳೆ ಮುರಳೀಧರರಾವ್‌ ಮತ್ತು ಜಾವಡೇಕರ್‌ ಅವರು ಕೂಡ ಸಂಘದ ಎಲ್ಲ ಮುಖಂಡರನ್ನೂ ಭೇಟಿ ಮಾಡುವ ಅಗತ್ಯವಿಲ್ಲ. ಸಂಘದ ಹಿರಿಯ ಮುಖಂಡರಾಗಿರುವ ಮು ಕುಂದ್‌ ಅವರನ್ನು ಭೇಟಿಯಾಗಿ ಬರಲಿ ಎಂಬ ಸಲಹೆ ನೀಡಿದರು ಎನ್ನಲಾಗಿದೆ.

ಮಾಸಾಂತ್ಯಕ್ಕೆ ಸೇರ್ಪಡೆ? : ಯತ್ನಾಳ ಅವರು ಇದೇ ತಿಂಗಳ ಅಂತ್ಯದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಯಾದ ನಂತರ ವಿಜಯಪುರದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬೃಹತ್‌ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

loader