ಹುಬ್ಬಳ್ಳಿ: ದೇಶದಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಐದೂ ರಾಜ್ಯಗಳಲ್ಲಿಯೂ ಬಿಜೆಪಿಗೆ ಹಿನ್ನಡೆಯಾಗಿದೆ. ಆದರೆ ಇದರಿಂದ ನಮ್ಮ ಪಕ್ಷಕ್ಕೆ ಯಾವುದೇ ರೀತಿ ಮುಖಭಂಗವಾಗಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಪಂಚರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಯತ್ನಾಳ್, ಲೋಕಸಭಾ ಚುನಾವಣಾ ಮೇಲೆ ಈ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ‌. ಮುಂದಿನ ಬಾರಿಯೂ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಸೋಲಿಗೆ ಪ್ರಮುಖ ಕಾರಣ ಟಿಕೇಟ್ ಹಂಚಿಕೆಯಲ್ಲಿ ಆದ ಸಮಸ್ಯೆ ಎಂದು ಸಮರ್ಥಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿಯೂ ಇದೇ ರೀತಿ ಟಿಕೇಟ್ ಹಂಚಿಕೆ ನಡೆದಲ್ಲಿ ನಾವೇ ಪೆಟ್ಟು ತಿನ್ನುತ್ತೇವೆ.  ಆದ್ದರಿಂದ ಕೆಲವು ಸಂಸದರಿಗೆ ಟಿಕೇಟ್ ನೀಡುವುದು ಸರಿಯಲ್ಲ. ಇದರಿಂದ ಪಕ್ಷ ಮೇಲೆ ದುಷ್ಪರಿಣಾಮ ಎದುರಾಗುತ್ತದೆ ಎಂದಿದ್ದಾರೆ. 

ಜೆಡಿಎಸ್ ವಿರುದ್ಧ ಗರಂ:  ಇನ್ನು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ಜೆಡಿಎಸ್ ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್‌ನವರು ಕಾಂಗ್ರೆಸ್ ಪಕ್ಷವನ್ನೇ ಮುಳುಗಿಸುತ್ತಾರೆ. ದೇವೇಗೌಡರಿಗೆ ಕಾಂಗ್ರೆಸ್  ಮುಳುಗಿಸುವುದೊಂದೆ ಕೆಲಸವಾಗಿದ್ದು, ಈ ಹಿಂದೆ ರಾಮಕೃಷ್ಣ ಹೆಗಡೆ ಹಾಗೂ  ಜೆ.ಎಚ್ ಪಟೇಲ್ ಅವರನ್ನೂ ಮುಳುಗಿಸಿದ್ದಾರೆ ಎಂದು ಜೆಡಿಎಸ್ ಮುಖಂಡರ ವಿರುದ್ಧವೂ ಕೂಡ ಯತ್ನಾಳ್ ವಾಕ್ ಪ್ರಹಾರ ನಡೆದಿದ್ದಾರೆ. 

ಒಂದೇ ವರ್ಷ ಜೆಡಿಎಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೆ ಕಾಂಗ್ರೆಸ್ ನಿರ್ನಾಮವಾಗುವುದು ಖಚಿತ. ಉಪ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಪರಮೇಶ್ವರ್ ಅವರನ್ನು ಪರಮೇಶ್ವರ ಕಾಪಾಡಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. 

ರಾಮಮಂದಿರ ವಿಚಾರ ಪ್ರಸ್ತಾಪ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದ ಬಗ್ಗೆಯೂ ಮಾತನಾಡಿದ ಯತ್ನಾಳ್, ಇದು ಮಂದಿರ ನಿರ್ಮಾಣಕ್ಕೆ ಸುಸಮಯ. ನಾವು ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದಿದ್ದಾರೆ.

'ಲೋಕಸಭಾ ಎಲೆಕ್ಷನ್‌ಗೂ ಮುನ್ನವೇ ರಾಮಮಂದಿರ ಶಂಕು ಸ್ಥಾಪನೆ'