ಕಾರ್ಡ್ ಸ್ವೈಪ್ ಮಾಡಿದಾಗ ಆ ಕಾರ್ಡ್'ನ ಬ್ಯಾಂಕ್'ನವರಿಗೆ ಲಾಭ. ಮೆಷೀನ್ ಕೊಟ್ಟ ಬ್ಯಾಂಕ್'ನವರು ಇಂತಿಷ್ಟು ಟ್ರಾನ್ಸಾಕ್ಷನ್ ಚಾರ್ಜ್'ಗಳನ್ನು ಕಾರ್ಡ್'ನ ಬ್ಯಾಂಕ್'ಗೆ ಸಂದಾಯ ಮಾಡಬೇಕು. ಕ್ರೆಡಿಟ್ ಕಾರ್ಡ್'ನ ಟ್ರಾನ್ಸಾಕ್ಷನ್'ಗಳಿಂದ ಬ್ಯಾಂಕುಗಳಿಗೆ ಆಗುವ ನಷ್ಟ ಇನ್ನೂ ಹೆಚ್ಚೆನ್ನಲಾಗಿದೆ.

ನವದೆಹಲಿ(ಸೆ. 29): ಕಾರ್ಡ್ ಸ್ವೈಪ್ ಮೆಷಿನ್'ಗಳಿಂದಾಗಿ ಬ್ಯಾಂಕುಗಳಿಗೆ ವರ್ಷಕ್ಕೆ 3,800 ಕೋಟಿ ರೂ ನಷ್ಟವಾಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿಕೊಂಡಿದೆ. ಕಾರ್ಡ್ ಸ್ವೈಪ್'ನಿಂದ ಬರುವ ಆದಾಯಕ್ಕಿಂತ ಮೆಷೀನ್'ಗಳ ನಿರ್ವಹಣಾ ವೆಚ್ಚವೇ ಹೆಚ್ಚಾಗಿರುವುದು ಇದಕ್ಕೆ ಕಾರಣವೆಂದು ಬ್ಯಾಂಕ್ ಹೇಳಿದೆ. ನೋಟ್ ಬ್ಯಾನ್ ಬಳಿಕ ಸ್ವೈಪಿಂಗ್ ಮೆಷೀನ್'ಗಳ ಸಂಖ್ಯೆ ಹೆಚ್ಚು ಮಾಡಿದರೂ ಕಾರ್ಡ್ ಬಳಕೆ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಎಸ್'ಬಿಐ ತಿಳಿಸಿದೆ.

ನೋಟ್ ಬ್ಯಾನ್'ಗಿಂತ ಮೊದಲು 3.4 ಲಕ್ಷ ಮೆಷೀನ್'ಗಳನ್ನು ಅಳವಡಿಸಿದ್ದ ಎಸ್'ಬಿಐ, ಈ ವರ್ಷದ ಜುಲೈನಷ್ಟರಲ್ಲಿಲ 6.13 ಲಕ್ಷ ಮೆಷೀನ್'ಗಳನ್ನು ಸ್ಥಾಪಿಸಿದೆ. ಎಸ್'ಬಿಐನೊಳಗೊಂಡಂತೆ ಎಲ್ಲಾ ಬ್ಯಾಂಕುಗಳು ನೋಟ್ ಬ್ಯಾನ್'ಗಿಂತ ಮುಂಚೆ ಸುಮಾರು 15 ಲಕ್ಷದಷ್ಟು ಮೆಷೀನ್ ಹೊಂದಿದ್ದವು. ಇದೀಗ, ಆ ಪ್ರಮಾಣ 28.4 ಲಕ್ಷಕ್ಕೇರಿದೆ. ಆದರೆ, ಎಸ್'ಬಿಐ ಹೇಳುವ ಪ್ರಕಾರ, ಜನರು ಕಾರ್ಡ್ ಸ್ವೈಪ್ ಮಾಡುವ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿಲ್ಲ. ಸರಕಾರದ ನಿರ್ದೇಶನದ ಮೇರೆಗೆ ಡೆಬಿಟ್ ಕಾರ್ಡ್ ವಹಿವಾಟು ವೆಚ್ಚವನ್ನು ಬಹಳಷ್ಟು ಇಳಿಕೆ ಮಾಡಿರುವುದು ಬ್ಯಾಂಕುಗಳ ಆದಾಯಕ್ಕೆ ಸಂಚಕಾರ ತಂದಿದೆ ಎಂಬುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಭಿಪ್ರಾಯವಾಗಿದೆ.

ಕಾರ್ಡ್ ಸ್ವೈಪಿಂಗ್ ಮೆಷೀನ್'ನ ಆರ್ಥಿಕತೆ ಹೇಗೆ?
ವಿವಿಧ ಬ್ಯಾಂಕುಗಳು ಪಿಒಎಸ್(ಪಾಯಿಂಟ್ ಆಫ್ ಸೇಲ್) ಮೆಸೀನ್, ಅಥವಾ ಸ್ವೈಪಿಂಗ್ ಮೆಷೀನ್'ಗಳನ್ನು ತಯಾರಿಸಿ ಮಾರಾಟ ಮಾಡುತ್ತವೆ. ಮೆಷೀನ್ ಹೊಂದಿದವರು ತಿಂಗಳಿಗೆ ಅಥವಾ ವರ್ಷಕ್ಕೆ ಇಂತಿಷ್ಟು ಬಾಡಿಗೆ ಕೊಡಬೇಕಾಗುತ್ತದೆ. ಇನ್ನು, ಕಾರ್ಡ್ ಸ್ವೈಪ್ ಮಾಡಿದಾಗ ಆ ಕಾರ್ಡ್'ನ ಬ್ಯಾಂಕ್'ನವರಿಗೆ ಲಾಭ. ಮೆಷೀನ್ ಕೊಟ್ಟ ಬ್ಯಾಂಕ್'ನವರು ಇಂತಿಷ್ಟು ಟ್ರಾನ್ಸಾಕ್ಷನ್ ಚಾರ್ಜ್'ಗಳನ್ನು ಕಾರ್ಡ್'ನ ಬ್ಯಾಂಕ್'ಗೆ ಸಂದಾಯ ಮಾಡಬೇಕು. ಕ್ರೆಡಿಟ್ ಕಾರ್ಡ್'ನ ಟ್ರಾನ್ಸಾಕ್ಷನ್'ಗಳಿಂದ ಬ್ಯಾಂಕುಗಳಿಗೆ ಆಗುವ ನಷ್ಟ ಇನ್ನೂ ಹೆಚ್ಚೆನ್ನಲಾಗಿದೆ.

ಕಾರ್ಡ್ ಮತ್ತು ಮೆಷೀನ್ ಎರಡೂ ಒಂದೇ ಬ್ಯಾಂಕಿಗೆ ಸೇರಿದ್ದರೆ ಮಾತ್ರ ಆ ಬ್ಯಾಂಕಿಗೆ ಲಾಭ. ಇಲ್ಲವಾದರೆ ಸ್ವೈಪಿಂಗ್ ಮೆಷೀನ್'ನವರಿಗೆ ನಷ್ಟ ಭಾಗ್ಯ.