ಕಳೆದ 5 ವರ್ಷಗಳಲ್ಲಿ ದೇಶದಲ್ಲಿ ನಡೆದ 61,000 ಕೋಟಿ ರು. ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್‌, ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ನವದೆಹಲಿ: ಕಳೆದ 5 ವರ್ಷಗಳಲ್ಲಿ ದೇಶದಲ್ಲಿ ನಡೆದ 61,000 ಕೋಟಿ ರು. ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್‌, ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಬಿಜೆಪಿ ನೇತೃತ್ವದ ಸರ್ಕಾರದ ಉನ್ನತ ನಾಯಕರಿಗೆ, ವಂಚಕರ ನಂಟು ಇದೆ. ಪಿಎನ್‌ಬಿ ಹಗರಣದ ಬಳಿಕ ಇನ್ನೊಂದು ಬ್ಯಾಂಕಿಂಗ್‌ ಹಗರಣ ಇದೀಗ ಬೆಳಕಿಗೆ ಬಂದಿದ್ದು, ಬ್ಯಾಂಕಿಂಗ್‌ ವಂಚನೆ ಜಾಕ್‌ ರಾಬಿನ್‌ಸನ್‌ (ವೇಗಕ್ಕೆ ಹೋಲಿಸುವ ಕಾಲ್ಪನಿಕ ವ್ಯಕ್ತಿ)ಗಿಂತ ವೇಗವಾಗಿ ಹಬ್ಬುತ್ತಿದೆ.

ರೊಟೊಮಿಕ್‌ ಪೆನ್ಸ್‌ ಕಂಪನಿಯ ಸಿಇಒ ವಿಕ್ರಮ್‌ ಕೊಠಾರಿ ಭಾರತೀಯ ಬ್ಯಾಂಕುಗಳಿಗೆ 800 ಕೋಟಿ ರು. ವಂಚಿಸಿ ತಲೆ ಮರೆಸಿಕೊಂಡಿದ್ದಾರೆ. ಕಳೆದ 5 ವರ್ಷಗಳಲ್ಲಿ 61,260 ಕೋಟಿ ರು.ನಷ್ಟುಬ್ಯಾಂಕಿಂಗ್‌ ವಂಚನೆ ನಡೆದಿದೆ. ವಂಚಕರು ಬಿಜೆಪಿಯ ಉನ್ನತಾಧಿಕಾರದ ಜೊತೆ ಸಂಬಂಧ ಹೊಂದಿದ್ದಾರೆ. ಇದು ಭಾರತದ ಸದೃಢ ಆರ್ಥಿಕತೆಯ ಬಗ್ಗೆ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಕಾಂಗ್ರೆಸ್‌ ಮುಖಂಡ ಮನೀಶ್‌ ತಿವಾರಿ ಆರೋಪಿಸಿದ್ದಾರೆ.