ಅಷ್ಟೊಂದು ತೂಕದ ಚೀಲವನ್ನು ಎತ್ತಿಕೊಂಡು ಹೋಗಲು ಸಾಧ್ಯವಾಗಲಿಲ್ಲ

ಲಖನೌ(ನ.18): ಉತ್ತರಪ್ರದೇಶದಲ್ಲಿ 2,000 ಮೊತ್ತದ ಹಳೆಯ ನೋಟು ವಿನಿಮಯಕ್ಕೆಂದು ಬಂದಿದ್ದ 60ರ ಹರೆಯದ ಮಹಿಳೆಯೊಬ್ಬರಿಗೆ ಬ್ಯಾಂಕ್ ಸಿಬ್ಬಂದಿ 1ರ ನಾಣ್ಯಗಳನ್ನು ಕೊಟ್ಟಿದ್ದು, ಅದನ್ನು ಕೊಂಡೊಯ್ಯಲು ಸಾಧ್ಯವಾಗದೇ, ಕ್ಯಾನ್ಸರ್‌ಪೀಡಿತ ಮಗನನ್ನು ಬ್ಯಾಂಕ್‌ಗೆ ಕರೆಸಿಕೊಂಡ ಘಟನೆ ನಡೆದಿದೆ. ಮೋಹನ್‌ಲಾಲ್‌ಗಂಜ್‌ನ ಸರ್ಜು ದೇವಿ(60) ಅವರ ಪುತ್ರ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಲ್ಲರೆ ಸಿಗದ ಕಾರಣ 3 ದಿನಗಳಿಂದ ರೇಡಿಯೋಥೆರಪಿ ಮಾಡಿರಲಿಲ್ಲ. ಗುರುವಾರ ದೇವಿ ಅವರು ತಮ್ಮಲ್ಲಿದ್ದ 2 ಸಾವಿರ ಮೊತ್ತದ ಹಳೆಯ ನೋಟುಗಳ ವಿನಿಮಯಕ್ಕೆಂದು ಬ್ಯಾಂಕಿಗೆ ತೆರಳಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ಯಾಂಕ್ ಸಿಬ್ಬಂದಿ ನೋಟುಗಳಿಲ್ಲ ಎಂಬ ನೆಪ ಹೇಳಿ, ದೇವಿ ಅವರಿಗೆ 1ರ ನಾಣ್ಯದಂತೆ 2 ಸಾವಿರ ನಾಣ್ಯಗಳನ್ನು ಚೀಲದಲ್ಲಿ ಹಾಕಿ ಕೊಟ್ಟಿದ್ದಾರೆ. ಅದು ಬರೋಬ್ಬರಿ 17 ಕೆಜಿ ತೂಕವಿತ್ತು. ಅಷ್ಟೊಂದು ತೂಕದ ಚೀಲವನ್ನು ಎತ್ತಿಕೊಂಡು ಹೋಗಲು ಸಾಧ್ಯವಾಗದೇ ಹರಸಾಹಸ ಪಟ್ಟ ದೇವಿ, ಕೊನೆಗೆ ಮನೆಯಲ್ಲಿದ್ದ ರೋಗಪೀಡಿತ ಮಗನಿಗೆ ಕರೆ ಮಾಡಿ ಕರೆಸಿಕೊಂಡು, ಚೀಲವನ್ನು ಕೊಂಡೊಯ್ಯಬೇಕಾಯಿತು ಎಂದು ‘ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.