ನವದೆಹಲಿ(ಸೆ.24): 5,000ಕೋಟಿ ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹದ ಒಡೆಯ ನಿತಿನ್ ಸಂದೇಸರ ಮತ್ತವರ ಕುಟುಂಬ ನೈಜೀರಿಯಾಕ್ಕೆ ಪಲಾಯನ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 

ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಮೋಸ್ಟ್ ವಾಟೆಂಡ್ ಆಗಿರುವ ನಿತಿನ್ ಸಂದೇಸರ , ಸಹೋದರ ಚೇತನ್, ಅತ್ತಿಗೆ ದೀಪ್ತಿಬೆನ್ ಸದ್ಯ ಯುಎಇಯಲ್ಲಿ ಇಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಯುಎಇಯಲ್ಲೇ ಇದ್ದರೆ ಬಂಧನಕ್ಕೊಳಗಾಗುವ ಭೀತಿ ಇದ್ದ ಹಿನ್ನೆಲೆಯಲ್ಲಿ ಸಂದೇಸರ ಕುಟುಂಬ ನೈಜೀರಿಯಾಕ್ಕೆ ಪಲಾಯನ ಮಾಡಿದೆ ಎನ್ನಲಾಗಿದೆ.

ಭಾರತ ಮತ್ತು ನೈಜೀರಿಯಾ ನಡುವೆ ಹಸ್ತಾಂತರ ಒಪ್ಪಂದ ಅಥವಾ ದ್ವಿಪಕ್ಷೀಯ ಕಾನೂನು ಸಹಕಾರ ಒಪ್ಪಂದ ಇಲ್ಲ. ಹೀಗಾಗಿ ಆಫ್ರಿಕಾದ ದೇಶದಿಂದ ಸಂದೇಸರ ಕುಟುಂಬವನ್ನು ಮರಳಿ ಕರೆತರುವುದು ಕಷ್ಟಸಾಧ್ಯ ಎಂದು ಮೂಲಗಳು ತಿಳಿಸಿವೆ.  ನಿತಿನ್ ಸಂದೇಸರ ಅವರನ್ನು ಆಗಸ್ಟ್ 2 ನೇ ವಾರದಲ್ಲಿ ಯುಎಇ ಪೊಲೀಸರು ಬಂಧಿಸಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದು ಸುಳ್ಳು ಮಾಹಿತಿ. ಅದಕ್ಕಿಂತ ಮೊದಲೇ ನಿತಿನ್ ಮತ್ತವರ ಕುಟುಂಬ ನೈಜೀರಿಯಾಕ್ಕೆ ಪಲಾಯನ ಮಾಡಿರಬಹುದೆಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಏತನ್ಮಧ್ಯೆ ತನಿಖಾ ಸಂಸ್ಥೆಗಳು ನಿತಿನ್ ಸಂದೇಸರ ವಿರುದ್ದ ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿವೆ. 

ಸಾಲ ವಂಚನೆ ಹಗರಣದ ಆರೋಪದ ಮೇಲೆ ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹಕ್ಕೆ ಸೇರಿದ ಸುಮಾರು 4700 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಕಳೆದ ಜೂನ್ ತಿಂಗಳಲ್ಲಿ ಮುಟ್ಟುಗೋಲು ಹಾಕಿತ್ತು. ಸಂದೇಸರ ಕುಟುಂಬ ಭಾರತ ಮತ್ತು ವಿದೇಶಗಳಲ್ಲಿ 300ಕ್ಕೂ ಹೆಚ್ಚು ಬೇನಾಮಿ ಮತ್ತು ನಕಲಿ ಕಂಪನಿ ಹೊಂದಿದೆ ಎಂಬ ಆರೋಪ ಕೂಡ ಇದೆ.