ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದ್ದು, ಸುಮಾರು 40 ಲಕ್ಷಕ್ಕೂ ಹೆಚ್ಚು ಹಣವನ್ನ ಬ್ಯಾಂಕ್ ಅಧಿಕಾರಿಗಳು ಗುಳುಂ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಾವು ಬ್ಯಾಂಕ್ ನಲ್ಲಿ ಇಟ್ಟಿದ್ದ ಲಕ್ಷಾಂತರ ರುಪಾಯಿ ಹಣವನ್ನ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ವಂಚಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದ್ದು, ಸುಮಾರು 40 ಲಕ್ಷಕ್ಕೂ ಹೆಚ್ಚು ಹಣವನ್ನ ಬ್ಯಾಂಕ್ ಅಧಿಕಾರಿಗಳು ಗುಳುಂ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಷ್ಟದಲ್ಲಿರುವ ರೈತರು ಕಳೆದ ಒಂದು ವಾರದಿಂದ ಹಣ ಪಡೆಯಲು ಬ್ಯಾಂಕ್ ಗೆ ಬಂದ ವೇಳೆ ಅಧಿಕಾರಿಗಳು ನಿಮ್ಮ ಖಾತೆಯಲ್ಲಿ ಯಾವುದೇ ಹಣ ಎಲ್ಲ, ಎಲ್ಲಾ ಹಣವನ್ನು ಡ್ರಾ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.
ಆದರೆ ರೈತರು ತಾವು ಯಾವುದೇ ಹಣವನ್ನ ಡ್ರಾ ಮಾಡಿ ಕೊಂಡಿಲ್ಲ ಎನ್ನುತ್ತಿದ್ದಾರೆ. ರೈತರು, ವಿವಿಧ ಮಹಿಳಾ ಸಂಘಗಳ ಖಾತೆಯಲ್ಲಿ ಉಳಿತಾಯ ಹಣ, ಎಫ್ ಡಿ ಸೇರಿದಂತೆ ಲಕ್ಷಾಂತರ ರುಪಾಯಿ ಹಣವನ್ನ ಅಧಿಕಾರಿಗಳು ನುಂಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಬ್ಯಾಂಕ್ ಗೆ ಹಣ ಕಟ್ಟಲು ಹೋದ ವೇಳೆ ಅವರಿಂದ ಹಣ ಪಡೆದು ಆ ಹಣವನ್ನ ಖಾತೆಗೆ ವರ್ಗಾಯಿಸದೇ ತಮ್ಮ ಬಳಿಯೇ ಇಟ್ಟು ಕೊಂಡಿದ್ದಾರೆ. ನಂತರ ಪಾಸ್'ಬುಕ್'ಗೆ ಕೈ ಬರಹದಲ್ಲಿ ಬರೆದು ಕೊಟ್ಟು ಯಾರಿಗೂ ಅನುಮಾನ ಬಾರದ ರೀತಿ ಹಣ ದೋಚಿದ್ದಾರೆ. ಈ ಅವ್ಯವಹಾರದಲ್ಲಿ ಬ್ಯಾಂಕ್'ನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್ ಎಂಬಾತನೊಂದಿಗೆ ಅಧಿಕಾರಿಗಳು ಶಾಮೀಲಾಗಿ ಹಣ ನುಂಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಬ್ಯಾಂಕ್ ಆಧಿಕಾರಿಗಳ ಕಳ್ಳಾಟ ತಿಳಿದಿರುವ ರೈತರು ಬ್ಯಾಂಕ್ ಮುಂಭಾಗ ಜಮಾಯಿಸಿ ನಮ್ಮ ಹಣ ನಮಗೆ ವಾಪಸ್ಸು ನೀಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
