ಡಾಕಾ[ಮಾ.05]: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರ ಕೋರಿಕೆ ಮೇರೆಗೆ ಬೆಂಗಳೂರು ಮೂಲದ ವಿಶ್ವವಿಖ್ಯಾತ ಹೃದಯ ತಜ್ಞ ಡಾ. ದೇವಿ ಶೆಟ್ಟಿಅವರು ಬಾಂಗ್ಲಾದೇಶದ ಸಚಿವರ ಆರೋಗ್ಯ ತಪಾಸಣೆ ಮಾಡಿದ್ದಾರೆ.

ತೀವ್ರ ಅನಾರೋಗ್ಯದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಂಗ್ಲಾ ಸಚಿವ ಒಬೈದುಲ್‌ ಖಾದರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏತನ್ಮಧ್ಯೆ, ಭಾನುವಾರ ಸಂಜೆಯೇ ಡಾ.ದೇವಿಶೆಟ್ಟಿಅವರಿಗೆ ಕರೆ ಮಾಡಿದ್ದ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರು, ಖಾದರ್‌ ಆರೋಗ್ಯವನ್ನು ತಪಾಸಣೆ ಮಾಡುವಂತೆ ಕೋರಿದ್ದರು.

ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಡಾಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾ. ಶೆಟ್ಟಿಅವರು, ನೇರವಾಗಿ ಖಾದರ್‌ ಅವರು ದಾಖಲಾಗಿದ್ದ ಶೇಖ್‌ ಮುಜಿಬ್‌ ಮೆಡಿಕಲ್‌ ವಿವಿ ಆಸ್ಪತ್ರೆಗೆ ತೆರಳಿದರು. ಸಚಿವರ ಆರೋಗ್ಯ ತಪಾಸಣೆ ಮಾಡಿದ ಶೆಟ್ಟಿಅವರು, ಸಚಿವರಿಗೆ ಸಿಂಗಾಪುರದಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗಲಿದೆ ಎಂದು ಸಲಹೆ ನೀಡಿದರು.