ಸೌತ್ ಎಂಡ್ ರಸ್ತೆಯ ವೃತ್ತದಲ್ಲಿರುವ ಡಾ. ರಾಜ್ ಕುಮಾರ್ ಕಂಚಿನ ಪ್ರತಿಮೆ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಸ್ತೆಯ ನಾಮಫಲಕವನ್ನು ರಾಘವೇಂದ್ರ ರಾಜಕುಮಾರ್ ಅನಾವರಣಗೊಳಿಸಿದರು.

ಬೆಂಗಳೂರು: ಯಡಿಯೂರು ವಾರ್ಡ್‌'ನ ನಿಟ್ಟೂರು ಶ್ರೀನಿವಾಸ್ ರಾವ್ ವೃತ್ತದಿಂದ ಮಾಧವನ್‌'ರಾವ್ ವೃತ್ತದವರೆಗಿನ ಸೌತ್ ಎಂಡ್ ರಸ್ತೆಗೆ ಶುಕ್ರವಾರ "ಡಾ. ಪಾರ್ವತಮ್ಮ ರಾಜ್‌'ಕುಮಾರ್ ರಸ್ತೆ" ಎಂದು ನಾಮಕರಣ ಮಾಡಲಾಯಿತು.

ಸೌತ್ ಎಂಡ್ ರಸ್ತೆಯ ವೃತ್ತದಲ್ಲಿರುವ ಡಾ. ರಾಜ್ ಕುಮಾರ್ ಕಂಚಿನ ಪ್ರತಿಮೆ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಸ್ತೆಯ ನಾಮಫಲಕವನ್ನು ರಾಘವೇಂದ್ರ ರಾಜಕುಮಾರ್ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪ್ಪಾಜಿ, ಅಮ್ಮ ಇಬ್ಬರೂ ಈಗ ನಮ್ಮೊಂದಿಗಿಲ್ಲ. ಅಪ್ಪಾಜಿಗೆ ಅಭಿಮಾನಿಗಳೇ ದೇವರಾಗಿದ್ದರು, ಅಂತಹ ಅಭಿಮಾನಿ ದೇವರುಗಳಲ್ಲೇ ನಾವಿಂದು ಅಪ್ಪಾಜಿ ಮತ್ತು ಅಮ್ಮನನ್ನು ಕಾಣುತ್ತಿದ್ದೇವೆ. ಅಜ್ಜಿ ನಾಗಮ್ಮ ಅವರಿಬ್ಬರ ಸ್ವರೂಪವಾಗಿ ನಮ್ಮೊಂದಿಗಿದ್ದಾರೆ. ಪ್ರಮುಖ ರಸ್ತೆಗೆ ಅಮ್ಮನ ಹೆಸರು ನಾಮಕರಣ ಮಾಡಿದ್ದು ಸಂತಸ ತಂದಿದೆ ಎಂದರು.

ನಗರದ ಪ್ರತಿಯೊಂದು ರಸ್ತೆಗಳ ಬದಿಯಲ್ಲೂ ಸರ್ಕಾರ ಸಾಲು ಸಾಲು ಗಿಡಗಳನ್ನು ನೆಡುವ ಮೂಲಕ ಬೆಂಗಳೂರಿನ ಉದ್ಯಾನನಗರಿ ಎಂಬ ಹೆಸರನ್ನು ಮರು ಸ್ಥಾಪಿಸಬೇಕು ಇದು ಕೇವಲ ಸರ್ಕಾರದ ಕೆಲಸವಲ್ಲ, ಸಾರ್ವಜನಿಕರೂ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಅದಮ್ಯ ಚೇತನ ಟ್ರಸ್ಟ್ ಅಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಮಾತನಾಡಿ, ರಸ್ತೆಗಳಿಗೆ ಪ್ರತಿಷ್ಠಿತರ ಹೆಸರು ನಾಮಕರಣ ಮಾಡುವುದರ ಜತೆಗೆ ಅವರ ಇತಿಹಾಸ ಸಂಸ್ಕೃತಿಯನ್ನು ಸಾರುವಂತೆ ಮಾಡಬೇಕು ಎಂದರು.

ನಟ ವಿನಯ್ ರಾಜ್ ಕುಮಾರ್, ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್. ರಮೇಶ್, ಉಪಮೇಯರ್ ಎಂ. ಆನಂದ್, ಪಾಲಿಕೆ ಸದಸ್ಯೆ ಪೂರ್ಣಿಮ, ನಿರ್ಮಾಪಕ ಚಿನ್ನೇಗೌಡ, ಡಾ. ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮಿ ಗೋವಿಂದ ರಾಜ್, ಸಹೋದರಿ ಗೌರಮ್ಮ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡಪ್ರಭ ವಾರ್ತೆ
epaperkannadaprabha.com