ಇತ್ತೀಚೆಗೆ ಸುರಿದ ಭಾರೀ ಮಳೆ ಯಿಂದಾಗಿ ಉದ್ಯಾನನಗರಿ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ವಾಹನ ಸವಾರರ ಬಲಿಗಾಗಿ ಕಾಯುತ್ತಿವೆ. ನಗರದ 19 ಸಾವಿರ ಕಿ.ಮೀ. ಉದ್ದದ ರಸ್ತೆಗಳಲ್ಲಿ 12 ಸಾವಿರ ಕಿ.ಮೀ. ರಸ್ತೆಗಳು ಬಾಯ್ತೆರೆದಿದ್ದು ವಾಹನ ಸವಾರರು ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ

ಬೆಂಗಳೂರು(ಸೆ.04): ಇತ್ತೀಚೆಗೆ ಸುರಿದ ಭಾರೀ ಮಳೆ ಯಿಂದಾಗಿ ಉದ್ಯಾನನಗರಿ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ವಾಹನ ಸವಾರರ ಬಲಿಗಾಗಿ ಕಾಯುತ್ತಿವೆ. ನಗರದ 19 ಸಾವಿರ ಕಿ.ಮೀ. ಉದ್ದದ ರಸ್ತೆಗಳಲ್ಲಿ 12 ಸಾವಿರ ಕಿ.ಮೀ. ರಸ್ತೆಗಳು ಬಾಯ್ತೆರೆದಿದ್ದು ವಾಹನ ಸವಾರರು ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಬಹುತೇಕ ಉತ್ತಮ ಸ್ಥಿತಿಯಲ್ಲಿ ಕಾಣುತ್ತಿದ್ದ ಬಿಬಿಎಂಪಿ ರಸ್ತೆಗಳ ಗುಣಮಟ್ಟವನ್ನು ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆ ಬಯಲು ಮಾಡಿದೆ. ಆಗಸ್ಟ್ ೧೫ರಂದು ಮುಂಜಾನೆ ಸುರಿದ ಭಾರೀ ಮಳೆಗೆ ಬಹುತೇಕ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡಿತ್ತು. ಈ ವೇಳೆ ಗುಂಡಿ ಮುಚ್ಚಿ ಸೂಕ್ತ ನಿರ್ವಹಣೆ ಮಾಡದ ಪರಿಣಾಮ ರಸ್ತೆಗಳು ಬಾವಿಗಳಂತಾಗಿವೆ. ಮತ್ತೊಂದೆಡೆ ಮುಚ್ಚಿದ ಗುಂಡಿಗಳು ಮತ್ತೆ ಬಾಯ್ತೆರೆದಿವೆ. ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಬಹುತೇಕ ರಸ್ತೆಗಳೇ ಕಿತ್ತುಹೋಗಿದ್ದು ಗುಂಡಿಗಳ ನಡುವೆ ರಸ್ತೆ ಹುಡುಕುವಂತಾಗಿದೆ.

ನಗರದ ಕೇಂದ್ರ ಭಾಗದಲ್ಲಿನ ಬಹುತೇಕ ರಸ್ತೆಗಳಲ್ಲಿ ನೀರು ನಿಂತಿರುವ ಪರಿಣಾಮ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮೆಜೆಸ್ಟಿಕ್ ಸುತ್ತಮುತ್ತಲ ರಸ್ತೆ, ವಿಲ್ಸನ್ ಗಾರ್ಡನ್, ಶಾಂತಿನಗರ, ಮಾರುಕಟ್ಟೆ, ಜೆ.ಸಿ. ರಸ್ತೆ, ಹಲಸೂರು ರಸ್ತೆಗಳು ಭಾರೀ ಗಾತ್ರದ ಹೊಂಡಗಳಿಂದ ತುಂಬಿ ಹೋಗಿರುವ ಪರಿಣಾಮ ವಾಹನ ಸವಾರರು ಆತಂಕದಿಂದ ಸವಾರಿ ಮಾಡುವಂತಾಗಿದೆ. ಐದು ದಿನಗಳ ಹಿಂದೆ ಬಿಬಿಎಂಪಿ ಆಯುಕ್ತರು ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಪರಿಶೀಲನೆ ನಡೆಸಿ 241 ಗಂಟೆಗಳಲ್ಲಿ ಗುಂಡಿ ಮುಚ್ಚಲು ಆದೇಶಿಸಿದ್ದರು. ಆದರೆ ಸತತ ಮಳೆಯಿಂದಾಗಿ ಗುಂಡಿ ಮುಚ್ಚಲು ಸಾಧ್ಯವಾಗದೆ ಮತ್ತಷ್ಟು ಗುಂಡಿಗಳು ಸೃಷ್ಟಿಯಾಗಿವೆ.

ಬಿಬಿಎಂಪಿ ಮಾಹಿತಿ ಪ್ರಕಾರ ನಗರದಲ್ಲಿ 4900 ಗುಂಡಿ ಪತ್ತೆಯಾಗಿದೆ. ಆದರೆ ವಾಸ್ತವವಾಗಿ ನಗರದಲ್ಲಿನ ಮುಖ್ಯರಸ್ತೆ, ಆರ್ಟಿರಿಯಲ್-ಸಬ್ ಆರ್ಟಿರಿಯಲ್ 19 ಕಿ.ಮೀ. ರಸ್ತೆಯಲ್ಲಿ 12 ಸಾವಿರ ಕಿ.ಮೀ. ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿವೆ.

ನನಸಾಗದ ಗುಂಡಿ ಮುಕ್ತ ಕನಸು:

ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ನವೆಂಬರ್ ತಿಂಗಳೊಳಗೆ ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತ ಮಾಡುವುದಾಗಿ ಘೋಷಿಸಿದ್ದರು. ಕಳೆದ ಎರಡು ತಿಂಗಳ ಅವಧಿಯಲ್ಲಿ 2495 ರಸ್ತೆ ಗುಂಡಿಗಳನ್ನು ಗುರುತಿಸಿ ಮುಚ್ಚಲಾಗಿದೆ. ಆದರೆ, ಇದೀಗ ಮತ್ತೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಗಳಲ್ಲಿ ಲೆಕ್ಕಕ್ಕೆ ಸಿಗಲಾರದಷ್ಟು ಗುಂಡಿಗಳು ಸೃಷ್ಟಿಯಾಗಿವೆ. ಅಲ್ಲದೆ, ಎರಡು ತಿಂಗಳ ಹಿಂದೆಯಷ್ಟೇ ಮುಚ್ಚಿದ್ದ ಗುಂಡಿಗಳೂ ಮತ್ತೆ ಬಾಯ್ತೆರೆದಿವೆ. ಬಿಬಿಎಂಪಿ

ವ್ಯಾಪ್ತಿಯಲ್ಲಿ ಬಿದ್ದಿದ್ದ ೩೦ ಸಾವಿ ರಕ್ಕೂ ಹೆಚ್ಚು ರಸ್ತೆಗುಂಡಿ ಮುಚ್ಚಲು ಹಾಗೂ ಡಾಂಬರೀಕರಣ ಮಾಡಲು ಕಳೆದ ಆರು ತಿಂಗಳಿನಿಂದ 600 ಕೋಟಿ ರು. ವ್ಯಯಿಸ ಲಾಗಿದೆ. ಹೀಗಿದ್ದರೂ ಬಹುತೇಕ ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆ ಜೀವಂತವಾಗಿದೆ.