ನೂತನ ಪೊಲೀಸ್‌ ಕಮಾಂಡ್‌ ಸೆಂಟರ್‌ ಸಿಬ್ಬಂದಿಯಲ್ಲಿ ಬಹುತೇಕರು ಅನ್ಯ ಭಾಷಿಕರು | ಇಲ್ಲಿರುವ 270 ಸಿಬ್ಬಂದಿಯ ಪೈಕಿ ತಮಿಳು ಭಾಷಿಕರೇ ಜಾಸ್ತಿ | ಸಿಬ್ಬಂದಿಗೆ ಕನ್ನಡ ಬಾರದಿರುವುದು ಕನ್ನಡಿಗರಿಗೆ ಶಾಕ್ | ಕಡಿಮೆ ವೇತನಕ್ಕೆ ಹೊರ ರಾಜ್ಯದವರ ನೇಮಕಾತಿ, ಕನ್ನಡಿಗರು ಮೂಲೆಗುಂಪು.
ಬೆಂಗಳೂರು: ರಾಜಧಾನಿಯಲ್ಲಿ ಕನ್ನಡಿಗರಿಗೆ ನಿರ್ಲಕ್ಷ್ಯ ಎಂಬ ಕೂಗ ಕೇಳಿ ಬರುತ್ತಲೇ ಇವೆ. ಅದಕ್ಕೆ ತಾಜಾ ನಿದರ್ಶನ ಎಂಬಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ‘ನಮ್ಮ 100' ನಿಯಂತ್ರಣ ಕೊಠಡಿಯಲ್ಲಿ ಕೆಲಸಕ್ಕೆ ನಿಯೋಜನೆ ಗೊಂಡಿರುವ ಸಿಬ್ಬಂದಿಯಲ್ಲಿ ಅನ್ಯ ಭಾಷಿಕರೇ ಬಹು ಸಂಖ್ಯಾತರು ಮತ್ತು ಕನ್ನಡಿಗರು ಅಲ್ಪಸಂಖ್ಯಾತರು.
ಏಕೆ ಗೊತ್ತೆ? ಬೆಂಗಳೂರಿನಲ್ಲಿ ಅನ್ಯ ಭಾಷಿಕರು ಹೆಚ್ಚಿದ್ದಾರಂತೆ. ಹೀಗಾಗಿ ಕನ್ನಡಿಗರನ್ನು ಮಾತ್ರ ಇಲ್ಲಿ ನೇಮಕ ಮಾಡಿಕೊಂಡರೆ ಅನ್ಯಭಾಷಿಕರಿಗೆ ತೊಂದರೆಯಾಗುತ್ತದಂತೆ. ಈ ಕಾರಣಕ್ಕೆ ವಿವಿಧ ಭಾಷೆ ಬಲ್ಲವರನ್ನು ನೇಮಕ ಮಾಡಲಾಗಿದೆಯಂತೆ. ಹೀಗಂತ ಹೇಳುವವರು ಮತ್ಯಾರು ಅಲ್ಲ ಖುದ್ದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್. ಯೋಜನೆ ಅನುಷ್ಠಾನಕ್ಕೆ ಮುನ್ನವೇ ಅವರು ಈ ಮಾತು ಹೇಳಿದ್ದರು. ಈಗ ಅದನ್ನು ಕಾರ್ಯ ರೂಪಕ್ಕೂ ತಂದಿದ್ದಾರೆ.
ಪೊಲೀಸ್ ಇಲಾಖೆಯ ಈ ಧೋರಣೆಗೆ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಮಾಂಡ್ ಸೆಂಟರ್ನಲ್ಲಿ ಕರೆ ಸ್ವೀಕರಿಸಲು ನೇಮಕಗೊಂಡಿರುವ ಸಿಬ್ಬಂದಿ ಪೈಕಿ ತಮಿಳು ಭಾಷಿಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡಿಗರ ಸಂಖ್ಯೆ ಕಡಿಮೆ ಇದ್ದು, ಅಲ್ಲಿನ ಸಿಬ್ಬಂದಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬಾರದಿರುವುದು ಕನ್ನಡಿಗರಿಗೆ ಶಾಕ್ ನೀಡಿದೆ. .
ಬಿವಿಜಿ ಕಂಪನಿಯಿಂದ ನಿರ್ವಹಣೆ: ಈ ಕೊಠಡಿಯಲ್ಲಿ ಕೆಲಸ ಮಾಡುವವರು ಹಲವು ಭಾಷೆ ಬಲ್ಲವರಾಗಿರಬೇಕು ಎಂದು ಕೊಠಡಿಯ ನಿರ್ವಹಣೆ ಹೊಣೆ ಹೊತ್ತಿರುವ ಬಿವಿಜಿ ಕಂಪನಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದರು. ಇದನ್ನು ಬಳಸಿಕೊಂಡಿರುವ ಬಿಜಿವಿ ಕಂಪನಿ ಕಡಿಮೆ ವೇತನಕ್ಕೆ ಹೊರರಾಜ್ಯದ ತಮಿಳುನಾಡು, ಆಂಧ್ರಪ್ರದೇಶದವರನ್ನು ನೇಮಕ ಮಾಡಿಕೊಂಡಿದೆ. ತನ್ಮೂಲಕ ಕರ್ನಾಟಕದ ಹೃದಯ ಭಾಗದಲ್ಲೇ, ಅದರಲ್ಲೂ ಪೊಲೀಸ್ ಇಲಾಖೆಯಂತಹ ಅತ್ಯಂತ ಮಹತ್ವದ ಇಲಾಖೆಯಲ್ಲೇ ಕನ್ನಡಿಗರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದು ಅಕ್ಷಮ್ಯ ಎಂಬುದು ಕನ್ನಡ ಪರ ಸಂಘಟನೆಗಳ ಆರೋಪ.
ಅತಿ ಹೆಚ್ಚು ಕನ್ನಡಿಗರಿರುವ ಇಲಾಖೆ ಎಂದರೆ ಅದು ಪೊಲೀಸ್ ಇಲಾಖೆ. ಹೊರ ಗುತ್ತಿಗೆ ಪಡೆದಿರುವ ಬಿವಿಜಿ ಕಂಪನಿ ಹೊರ ರಾಜ್ಯದವರಿಗೆ ಪ್ರಾಧಾನ್ಯತೆ ನೀಡಿರುವುದನ್ನು ಖಂಡಿಸುತ್ತೇವೆ. ಕೂಡಲೇ ಸಂಪೂರ್ಣವಾಗಿ ಕನ್ನಡ ಭಾಷಿಕರನ್ನು ನೇಮಿಸಿ ಕೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ. ಅಲ್ಲದೆ, ಕಸ ನಿರ್ವಹಣೆ ವಿಚಾರದಲ್ಲಿ ಬಿವಿಜಿ ಕಂಪನಿ ಕಳಂಕಿತ ಹೆಸರು ಪಡೆದಿದೆ.
- ಪ್ರವೀಣ್ ಶೆಟ್ಟಿ, ಕರವೇ ಅಧ್ಯಕ್ಷ
ಈಗಷ್ಟೇ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದು, ಕೆಲಸಕ್ಕೆ ಅರ್ಜಿ ಹಾಕಿದ್ದೆ. ಸಂದರ್ಶನ ನಡೆಸಿ ನನ್ನ ಆಯ್ಕೆ ಮಾಡಿದ್ದಾರೆ. ಮಾಸಿಕ 8-10 ಸಾವಿರ ವೇತನ ಪಾವತಿಸುತ್ತಾರೆ. ಪ್ರತಿಯೊಬ್ಬರಿಗೂ ಒಂದೇ ರೀತಿಯಲ್ಲಿ ವೇತನ ಇಲ್ಲ.
- ಆಂಧ್ರಪ್ರದೇಶ ಮೂಲದ ಸಿಬ್ಬಂದಿ
ಕನ್ನಡಪ್ರಭ ವಾರ್ತೆ
epaper.kannadaprabha.in
