ಬೆಂಗಳೂರು(ಸೆ.14): ಕಳೆದ ಎರಡು ದಿನಗಳಿಂದ ಕಾವೇರಿ ಕಿಚ್ಚಿಗೆ ಬೆಂದು ಹೋಗಿದ್ದ ಬೆಂಗಳೂರು ಸಹಜ ಸ್ಥಿತಿಗೆ ಮರಳಿದೆ. ನಾಯಂಡನಹಳ್ಳಿ, ಸ್ಯಾಟ್ಲೈಟ್ ಬಸ್ ನಿಲ್ದಾಣದಲ್ಲಿ ಪರಿಸ್ಥಿತಿ ಕೊಂಚ ಮಟ್ಟಿಗೆ, ಹತೋಟಿಗೆ ಬಂದಿದ್ದರೆ, ಹೆಗ್ಗನಹಳ್ಳಿ ಮಾತ್ರ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ರ್ಯಾಪಿಡ್ ಯಾಕ್ಸನ್ ಫೋರ್ಸ್ ಫೀಲ್ಡಿಗಿಳಿದಿದ್ದರೂ, ಹೆಗ್ಗನಹಳ್ಳಿಯಲ್ಲಿ ಮಾತ್ರ ಪರಿಸ್ಥಿತಿ ತಹಬದಿಗೆ ಬರಬೇಕಿದೆ. ಇಂದೂ ಕೂಡಾ ಈ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿಯಲಿದೆ.
ಎರಡು ದಿನದ ನಂತರ ಸಹಜ ಸ್ಥಿತಿಗೆ ‘ಬೆಂದ’ ಕಾಳೂರು
ಸೋಮವಾರ ಮಧ್ಯಾಹ್ನ ಕಾವೇರಿ ಕಿಚ್ಚಿಗೆ ಬೆಂಗಳೂರು ನಲುಗಿ ಹೋಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಟ್ಟರು. ಇದಾದ ನಂತರ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಿ, ಪರಿಸ್ಥಿತಿಯನ್ನು ತಹಬದಿಗೆ ತಂದರು.
ನಿನ್ನೆ ಬೆಳಗ್ಗೆ ಕರ್ಫ್ಯೂ ಇದ್ದರೂ ಹೆಗ್ಗನಹಳ್ಳಿಯಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆದವು. ಆದರೆ, ಪೊಲೀಸರು ಟೈಟ್ ಸೆಕ್ಯೂರಿಟಿಯಿಂದ ಕಿಡಿಗೇಡಿಗಳ ಕೃತ್ಯ ವಿಫಲವಾಯಿತು. ಹೆಗ್ಗನಹಳ್ಳಿ ಹೊರತು ಪಡಿಸಿದ್ರೆ, ಸಿಟಿಯ ಯಾವುದೇ ಭಾಗದಲ್ಲೂ ಅಹಿತಕರ ಘಟನೆ ನಡೆಯಲಿಲ್ಲ, ಹೀಗಾಗಿ, ಸಂಜೆ ವೇಳೆ ಬೆಂಗಳೂರು ಸಹಜ ಸ್ಥಿತಿಗೆ ಮರಳಿತು.
ಇದಾದ ಬಳಿಕ ಕರ್ಫ್ಯೂ ಮುಂದುವರಿಸಬೇಕಾ ಬೇಡಾವಾ ಎಂಬ ಗೊಂದಲ ಉಂಟಾಯಿತು. ರಾತ್ರಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಇಂದು ಕೂಡಾ ಕರ್ಫ್ಯೂ ಮುಂದುವರೆಸುವುದಾಗಿ ತಿಳಿಸಿದರು.
ಇನ್ನು ಸಭೆ ಬಳಿಕ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ಧೇಶಕ ಓಂ ಪ್ರಕಾಶ್, ಬೆಂಗಳೂರಿನಲ್ಲಿ ಅರಸೇನಾ ಪಡೆಗಳ ಬಂದೋಬಸ್ತ್ ಮುಂದುವರೆದಿದ್ದು, ಸೂಕ್ಷ ಪ್ರದೇಶಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಮುನ್ನೆಚ್ಚಾರಿಕ ಕ್ರಮವಾಗಿ ರಾಜ್ಯದ್ಯಾಂತ 600 ಜನರನ್ನು ಬಂಧಿಸಿದ್ದು, ಕಾನೂನು ಉಲ್ಲಘಿಂಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸದ್ಯ ಬೆಂಗಳೂರು ಶಾಂತವಾಗಿದ್ದು, ಅಹಿತಕರ ಘಟನೆ ನಡೆಯಲು ಕಾರಣರಾದ 600ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇಂದಿನ ಪರಿಸ್ಥಿತಿ ನೋಡಿಕೊಂಡು ಕರ್ಫ್ಯೂ ಹಿಂಪಡೆಯುವ ಸಾಧ್ಯತೆ ಇದೆ. ಗಲಾಟೆ ನಡೆದ ಏರಿಯಾಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಕೇಂದ್ರದಿಂದ ಹೆಚ್ಚುವರಿ ಭದ್ರತಾ ಪಡೆ, ಸಿವಿಲ್ ಡಿಫೆನ್ಸ್ ಫೋರ್ಸ್ ಹೀಗೆ ಹೆಚ್ಚುವರಿಯಾಗಿ ಸಾವಿರಾರು ಮಂದಿ ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ.
