ಬೆಂಗಳೂರು(ಸೆ.13): ಪ್ರತಿಭಟನೆ, ಆಕ್ರೋಶ, ಲಾರಿಗೆ ಬೆಂಕಿ, ಬಸ್ ಗೆ ಬೆಂಕಿ, ಆಕ್ರೋಶ, ಕಲ್ಲು ತೂರಾಟ, ನಿಷೇಧಾಜ್ಞೆ, ಕರ್ಫ್ಯೂ. ಹೌದು ಇವಿಷ್ಟು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿನ್ನೆ ಕಿವಿಗೆ ಅಪ್ಪಳಿಸಿದ ಪದಗಳು. ಬೆಂಗಳೂರು ಇಂದೆಂದೂ ಕಾಣದ ಒಂದು ಉಗ್ರ ಹೋರಾಟ ಎದುರಿಸಿದೆ. ತಮಿಳುನಾಡಿನಲ್ಲಿ ನೆಲಸಿರುವ ಕನ್ನಡಿಗರ ಮೇಲೆ ಹಲ್ಲೆಯಾಗಿದ್ದನ್ನು ಸಹಿಸದ ಕನ್ನಡಿಗರು ಕೆರಳಿದ್ದಾರೆ. ತಾಳ್ಮೆಯಿಂದಿದ್ದ ಕನ್ನಡಿಗರು ಅಕ್ಷರಶಃ ಕೆಂಡ ಕಾರಿದ್ದಾರೆ.
ತಮಿಳುನಾಡು ಲಾರಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 25ರಿಂದ 30 ಲಾರಿಗಳು ಬೆಂಕಿಗಾಹುತಿಯಾಗಿವೆ. ಇದಲ್ಲದೆ, ಕೆಪಿಎನ್ ಟ್ರಾವೆಲ್ಸ್ ಸೇರಿದ 35ಕ್ಕೂ ಹೆಚ್ಚು ಬಸ್ ಗಳು ಭಸ್ಮವಾಗಿವೆ.
ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಪರಿಸ್ಥಿತಿಯನ್ನು ಹತೋಟಿಗೆ ತರಲು ಹೈರಾಣವಾಗಿ ಹೋಗಿದ್ದರು. ಮಧ್ಯಾಹ್ನದ ವೇಳೆಗೆ ಬೆಂಗಳೂರಿನಲ್ಲಿ ಅಘೋಷಿತ ಬಂದ್ ನಿರ್ಮಾಣವಾಗಿತ್ತು. ಎಲ್ಲರೂ ಧಾವಂತದಲ್ಲಿ ಮನೆ ಸೇರಿಕೊಂಡಿದ್ದರು. ಸಂಜೆ ವೇಳೆ ನಿಷೇಧಾಜ್ಞೆ ಜಾರಿಗೊಳಿಸಿದ ಪೊಲೀಸರು, ಪರಿಸ್ಥಿತಿ ತಹಬದಿಗೆ ಬರಬಹುದು ಎಂದು ಯೋಜಿಸಿದ್ರು ಅನಿಸುತ್ತದೆ. ಆದರೆ, ರಾತ್ರಿಯಾದರೂ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುವುದು ಮಾತ್ರ ನಿಲ್ಲಲಿಲ್ಲ.
ಕೊನೆಗೆ ಗೃಹ ಸಚಿವ, ಸಿಎಂ ನೇತೃತ್ವದ ಸಭೆ ನಂತರ, ಕರ್ಫ್ಯೂ ಜಾರಿಗೊಳಿಸಲಾಯಿತು. ಉದ್ನಿಗ್ನಗೊಂಡ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಎಲ್ಲೆಲ್ಲಿಕರ್ಫ್ಯೂಜಾರಿ
ಮಾಗಡಿ ರೋಡ್, ಕೆ.ಪಿ ಅಗ್ರಹಾರ, ವಿಜಯನಗರ, ಚಂದ್ರಾಲೇಔಟ್, ಬ್ಯಾಟರಾಯನಪುರ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಕೆಂಗೇರಿ, ಕಾಮಾಕ್ಷಿಪಾಳ್ಯ, ರಾಜಗೋಪಾಲನಗರ, ಸುಂಕದಕಟ್ಟೆ, ಲಗ್ಗೆರೆ, ರಾಜಾಜಿನಗರ, ನಂದಿನಿ ಲೇಔಟ್ ,ಪೀಣ್ಯ, ಯಶವಂತಪುರ ಈ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯು ಜಾರಿಗೊಳಿಸಿ ಕಂಡಲ್ಲಿ ಗುಂಡು ಆದೇಶ ಜಾರಿಗೊಳಿಸಲಾಗಿದೆ.
ಕರ್ಫ್ಯೂಅಂದರೆ?
-ಕರ್ಫ್ಯೂ ಪ್ರದೇಶಗಳಲ್ಲಿ ಜನ ರಸ್ತೆಯಲ್ಲಿ ಪೊಲೀಸರ ಕಣ್ಣಿಗೆ ಕಾಣುವಂತಿಲ್ಲ
-ಪೊಲೀಸರು ಕಂಡಲ್ಲಿ ಗುಂಡು ಹಾರಿಸುವ ಅಧಿಕಾರ ಹೊಂದಿರುತ್ತಾರೆ
-ಗುಂಡು ಹಾರಿಸಲು ಮೇಲಧಿಕಾರಿಯ ಆದೇಶ ಪಡೆಯುವ ಅಗತ್ಯವಿಲ್ಲ
-ವ್ಯಕ್ತಿ ಮೇಲೆ ಅನುಮಾನ ಬಂದಲ್ಲಿ ಗುಂಡು ಹಾರಿಸುವ ಅಧಿಕಾರವಿದೆ
-ಕರ್ಫ್ಯೂ ವೇಳೆ ಅರೆಸ್ಟ್ ಆದರೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ
-16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫೂ ಜಾರಿಗೊಳಿಸಿದರೆ, ಬೆಂಗಳೂರಿನಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
144 ಸೆಕ್ಷನ್ಅಂದರೆ?
-5ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ
-ಯಾವುದೇ ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ
-ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವಂತಿಲ್ಲ
-ಪ್ರತಿಕೃತಿ ದಹನ ಮತ್ತು ಪ್ರತಿಭಟನೆ ಮಾಡುವಂತಿಲ್ಲ
-ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವಂತಿಲ್ಲ
ಒಟ್ಟಾರೆ, ಸಾರ್ವಜನಿಕರು ಕೂಡ ಕಾನೂನು ಸುವ್ಯವಸ್ಥೆ ಕಾಪಾಡು ನಿಟ್ಟಿನಲ್ಲಿ. ಪೊಲೀಸ್ ಇಲಾಖೆ ಕರ್ಫ್ಯೂ ಜಾರಿಗೊಳಿಸಿದೆ. ಬೆಂಗಲೂರಿನಲ್ಲಿ ಪರಿಸ್ಥಿತಿ ಕೈ ಮೀರಿದ್ದು, ಕಾವೇರಿ ಹೋರಾಟ ಇವತ್ತು ಯಾವ ಸ್ವರೂಪ ಪಡೆದುಕೊಳ್ಳತ್ತದೆ ಗೊತ್ತಿಲ್ಲ. ಆಂದ್ರೆ, ಜನರು ಪ್ರಚೋದನೆಗೆ ಒಳಗಾಗದೇ ಶಾಂತ ರೀತಿಯಲ್ಲಿ ಹೋರಾಟ ಮಾಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
