ರಾಜಸ್ಥಾನ ಮೂಲದ ಖಾನ್ (37) ಐಸಿಸ್ ಉಗ್ರ ಸಂಬಂತ ಚಟುವಟಿಕೆಗಳಲ್ಲಿ ಭಾಗಿಯಾದ ಅಪರಿಚಿತ ವ್ಯಕ್ತಿಗಳ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಎನ್‌ಐಎ ಖಾನ್ ವಿರುದ್ಧ ಪ್ರಕರಣಕ್ಕೆ ಸಂಬಂಸಿದಂತೆ ಕಳೆದ ವರ್ಷ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ.

ನವದೆಹಲಿ(ಏ.06): ಸೌದಿ ಅರೇಬಿಯಾದಿಂದ ಮಂಗಳವಾರವಷ್ಟೇ ಗಡಿಪಾರಾಗಿದ್ದ ಬೆಂಗಳೂರು ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯೊಂದಿಗೆ ನಂಟಿದ್ದ, ಶಂಕಿತ ಐಸಿಸ್ ಬೆಂಬಲಿಗ ಅಮ್ಜದ್ ಖಾನ್ ಎಂಬಾತನನ್ನು ಎನ್‌ಐಎ ಬಂಧಿಸಿದೆ. ಉಗ್ರ ಚಟುವಟಿಕೆಗಳಿಗಾಗಿ ಆನ್‌ಲೈನ್ ವ್ಯವಹಾರಗಳನ್ನು ನಡೆಸಿದ್ದ ಆರೋಪವಿರುವ ಅಮ್ಜದ್ ಖಾನ್‌ನನ್ನು ಬುಧವಾರ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿಕೆಯೊಂದರಲ್ಲಿ ತಿಳಿಸಿದೆ.

ರಾಜಸ್ಥಾನ ಮೂಲದ ಖಾನ್ (37) ಐಸಿಸ್ ಉಗ್ರ ಸಂಬಂತ ಚಟುವಟಿಕೆಗಳಲ್ಲಿ ಭಾಗಿಯಾದ ಅಪರಿಚಿತ ವ್ಯಕ್ತಿಗಳ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಎನ್‌ಐಎ ಖಾನ್ ವಿರುದ್ಧ ಪ್ರಕರಣಕ್ಕೆ ಸಂಬಂಸಿದಂತೆ ಕಳೆದ ವರ್ಷ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ. ‘‘ರಾಜಸ್ಥಾನ ನಿವಾಸಿ ಅಯಾನ್ ಖಾನ್ ಸಲಫಿ ಅಲಿಯಾಸ್ ಮುಹಮ್ಮದ್ ಅಯಾನ್ ಅಲಿಯಾಸ್ ಅಲ್ ವಲಾ ವಲ್ ಬರಾ (ಆನ್‌ಲೈನ್ ಗುರುತುಗಳು) ಪ್ರಕರಣದಲ್ಲಿ ಕಂಡು ಬಂದ ಪ್ರಮುಖ ಹೆಸರುಗಳಲ್ಲಿ ಒಂದಾಗಿದೆ. 2014ರಿಂದ ಆತ ಸೌದಿ ಅರೇಬಿಯಾದ ರಿಯಾಧ್‌ನಲ್ಲಿ ಉದ್ಯೋಗದಲ್ಲಿದ್ದ. ಪ್ರಾಥಮಿಕ ತನಿಖೆಯ ಬಳಿಕ ಅಯಾನ್ ಖಾನ್ ಸಲಫಿಯ ನಿಜವಾದ ಹೆಸರು ಅಮ್ಜದ್ ಖಾನ್, ಆತ ರಾಜಸ್ಥಾನದ ಚುರು ಜಿಲ್ಲೆ ನಿವಾಸಿ ಎಂಬುದು ಗೊತ್ತಾಗಿದೆ’’ ಎಂದು ಹೇಳಿಕೆ ತಿಳಿಸಿದೆ.

ಹೊಸದಾಗಿ ರಚಿಸಲಾಗಿರುವ ಜುನೂದ್-ಉಲ್-ಖಲೀಫ-ಫಿಲ್-ಹಿಂದ್ (ಜೆಕೆಎಚ್)ನ ತಲೆ ಮರೆಸಿಕೊಂಡಿರುವ ಆರೋಪಿ ಯೂಸ್-ಅಲ್-ಹಿಂದಿ ಅಲಿಯಾಸ್ ಶಫಿ ಆರ್ಮರ್ ಎಂಬಾತನೊಂದಿಗೆ ಸಂಚು ರೂಪಿಸಿದವರಲ್ಲಿ ಖಾನ್ ಪ್ರಮುಖನೆಂದು ಎನ್‌ಐಎ ಹೇಳಿದೆ. ಆರೋಪಿಗಳಾದ ನಫೀಸ್ ಖಾನ್, ಶಫಿ ಆರ್ಮರ್ ಅಲಿಯಾಸ್ ಯೂಸ್ ಅಲ್ ಹಿಂದಿ, ರಿಜ್ವಾನ್ ಅಲಿಯಾಸ್ ಖಲೀದ್ ಅಲಿಯಾಸ್ ಆಜಾದ್ ಭಾಯ್ ಮುಂತಾದವರೊಂದಿಗೆ ಖಾನ್ ನಿರಂತರ ಆನ್‌ಲೈನ್ ಸಂಪರ್ಕದಲ್ಲಿದ್ದ. ಫೇಸ್‌ಬುಕ್, ನಿಂಬೂಜ್, ಟ್ರಿಲಿಯನ್, ಟೆಲಿಗ್ರಾಂನಂಥ ಮೆಸೆಜಿಂಗ್ ಅಪ್ಲಿಕೇಶನ್‌ಗಳ ಮೂಲಕ ಅವರು ಪರಸ್ಪರ ಸಂಪರ್ಕದಲ್ಲಿದ್ದರು. 2015 ಡಿಸೆಂಬರ್‌ನಿಂದ 2016 ಜನವರಿ ನಡುವೆ ಪ್ರಸ್ತುತ ಬೆಂಗಳೂರು ಜೈಲಿನಲ್ಲಿರುವ ಅಹ್ಮದಾಬಾದ್ ನಿವಾಸಿ, ಬೆಂಗಳೂರು ಚರ್ಚ್ ಸ್ಟ್ರೀಟ್ ಸ್ಫೋಟದ ಪ್ರಮುಖ ಆರೋಪಿ ಅಲ್ಮಾಜೇಬ್ ಆಫ್ರಿದಿಯೊಂದಿಗೂ ಖಾನ್, ನಿಂಬೂಜ್ ಚ್ಯಾಟ್ ಮೂಲಕ ಆನ್‌ಲೈನ್ ಸಂಪರ್ಕದಲ್ಲಿದ್ದನು ಎಂದು ಎನ್‌ಐಎ ತಿಳಿಸಿದೆ.