ರಾಜ್ಯಸರ್ಕಾರವು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ  ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸುವ ಮತ್ತು  28,847 ಶಾಲೆಗಳನ್ನು  ವಿಲೀನದ ಹೆಸರಲ್ಲಿ ಮುಚ್ಚುವ ಪ್ರಸ್ತಾವ ಹೊಂದಿದೆ.

ಸರ್ಕಾರವು ಈ ನಿಲುವನ್ನು ಬದಲಿಸಬೇಕೆಂದು ಪ್ರಾಧಿಕಾದ  ಮುಂದಾಳತ್ವದಲ್ಲಿ ನಾಡಪರ ಕಾಳಜಿಯ ಹಲವರು ಮುಖ್ಯಮಂತ್ರಿಗಳಿಗೆ ನಿಯೋಗದ
ಮೂಲಕ ಮನವಿ ಸಲ್ಲಿಸಿದರು. ಈ ಬಗ್ಗೆ ಬೆಂಗಳೂರಿನ ಉದ್ಯಮಿ ಕಿರಣ್ ಶಾ ಮುಜುಂದಾರ್ ಪ್ರತಿಕ್ರಿಯಿಸಿ ಇಂಗ್ಲಿಷ್ ಮಾಧ್ಯಮ ಬೇಡವೆನ್ನುತ್ತಿರುವವರೆಲ್ಲಾ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಕಾಳಜಿಯಿರದ, ಪ್ರಚಾರಕ್ಕೆ ಹಪಹಪಿಸುವ ಕಿರಿಕ್ಕು ಜನ ಎಂದು ಟೀಕಿಸಿದರು.

ಇವರಿಗೆ  ಇಂಗ್ಲಿಷ್ ಮಾಧ್ಯಮದಲ್ಲಿನ ಕಲಿಕೆಗೂ ವ್ಯತ್ಯಾಸ ತಿಳಿದಂತಿಲ್ಲ! ನಾಡಿನ ಹಳ್ಳಿಹಳ್ಳಿಗಳಲ್ಲಿನ ಮಕ್ಕಳ ಮತ್ತು ಶಾಲೆಗಳ ಪರಿಸ್ಥಿತಿಯಿರಲಿ, ಅಸಲಿಗೆ
ಶಿಕ್ಷಣದ ಬಗ್ಗೆ ಸ್ಪಷ್ಟವಾದ ಕಲ್ಪನೆಯೂ ಇಲ್ಲ. ಹಾಗಾಗಿ ಇವರದ್ದು ಹಗುರವಾದ ಅಭಿಪ್ರಾಯವಾಗಿದೆ. ನಿಯೋಗದಲ್ಲಿ ಹಲವು ಹಿರಿಯ ಚಿಂತಕರಿದ್ದು, ಇಂತಹ ಹಿರಿಯರ ಬಗ್ಗೆ ಅಸಭ್ಯವಾಗಿ ಮಾತಾಡುವ ಮುಜುಂದಾರ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕಿದೆ.

ಕಲಿಕೆ ತಾಯ್ನುಡಿಯಲ್ಲೇ ಇರಬೇಕು
ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಸರ್ಕಾರದ್ದು. ಇದರ ಅಂಗವೇ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು. ಸರ್ಕಾರವು ತನ್ನ ನಾಡಿನ ಮಕ್ಕಳಿಗೆ ಕಲಿಕೆಯಲ್ಲಿ ಏನಿರಬೇಕು? ಪ್ರಪಂಚದ ಎಲ್ಲ ಅರಿಮೆ ತನ್ನ ನಾಡಿನ ಮಕ್ಕಳಿಗೆ ಸಿಗುವಂತೆ ಮಾಡಲು ಏನೇನು ಮಾಡಬೇಕು ಎಂದೂ ಯೋಚಿಸಿ, ಯೋಜಿಸಿ ಜಾರಿಗೊಳಿಸಬೇಕು.

ಪ್ರಪಂಚದ ಮುಂದುವರೆದ ನಾಡುಗಳಾದ ಜಪಾನ್, ಚೀನಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮೊದಲಾದ ದೇಶಗಳಲ್ಲೆಲ್ಲಾ ಕಲಿಕೆಯೆಂಬುದು ತಾಯ್ನುಡಿಯಲ್ಲೇ ಇದೆ. ಯುನೆಸ್ಕೋ ಕೂಡಾ ತಾಯ್ನುಡಿಯಲ್ಲಿನ ಕಲಿಕೆಗೆ ಒತ್ತು ನೀಡಿ ನಿಲುವನ್ನು ಘೋಷಿಸಿದೆ. ಕರ್ನಾಟಕವೂ ಸರ್ವೋಚ್ಚ ನ್ಯಾಯಾಲಯದ ಆಶಯದಂತೆ ಮಾತೃಭಾಷಾ ಶಿಕ್ಷಣಕ್ಕೆ ಒತ್ತುಕೊಟ್ಟು ಭಾಷಾನೀತಿ ರೂಪಿಸಿಕೊಂಡಿದೆ. ತಾಯ್ನುಡಿಯಲ್ಲಿ ಕಲಿಕೆಯು ಪರಿಣಾಮಕಾರಿ ಎನ್ನುವುದರ ಬಗ್ಗೆ ಈ ಹಿನ್ನೆಲೆಯಲ್ಲಿ ಯಾವ ಅಪಸ್ವರವೂ ಇಲ್ಲ ಎನ್ನುವುದು ವಾಸ್ತವವಾಗಿದೆ. 

ಇಂಗ್ಲಿಷ್ ಕಲಿತರೇ ಒಳ್ಳೆ ಕೆಲಸ ಎಂಬ ಭ್ರಮೆ
ಎಲ್ಲೆಡೆಯಂತೆ ಕರ್ನಾಟಕದಲ್ಲಿಯೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಒಳ್ಳೆಯ ಕೆಲಸಗಳು ಸಿಗುತ್ತವೆ ಎನ್ನುವ ಭ್ರಮೆಯನ್ನು ಹರಡಲಾಗಿದೆ. ಇದು ಇಂಗ್ಲಿಷ್ ಮಾಧ್ಯಮ ಶಾಲೆಗಳು ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಹಬ್ಬಿಸಿರುವ ಸುಳ್ಳು. ತಾಯ್ನುಡಿಯಲ್ಲಿ ಕಲಿತ ಮಕ್ಕಳು ತಿರುಳು ಚಿಂತನೆ/ಕಲಿಕೆಯಲ್ಲಿ ಅತ್ಯುತ್ತಮರಾಗಿರುತ್ತಾರೆ ಎನ್ನುವುದು ವೈಜ್ಞಾನಿಕ ಸತ್ಯ. ಇಂಗ್ಲಿಷ್ ಮಾತಾಡುವುದನ್ನೇ ಬುದ್ಧಿವಂತಿಕೆ ಎಂದು ನಂಬುವ ಅಮಾಯಕ ತಾಯ್ತಂದೆಯರು ಇಂಗ್ಲಿಷ್ ಮಾಧ್ಯಮದ ಮೊರೆ ಹೋಗುವುದು ಸಹಜ.

ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲಿ, ಜೊತೆಯಲ್ಲಿ ಇಂಗ್ಲಿಷನ್ನೂ ಕಲಿಸುತ್ತೇವೆ ಎನ್ನುವ ಭರವಸೆಯನ್ನು ಕೊಡಬೇಕಾದದ್ದು ರಾಜ್ಯಸರ್ಕಾರ. ಇಂಗ್ಲಿಷ್ ಕಲಿತರೆ ಒಳ್ಳೆಯ ಕೆಲಸಗಳು ಸಿಗುತ್ತವೆ ಎನ್ನುವುದು ಮತ್ತೊಂದು ಭ್ರಮೆ. ಸರ್ಕಾರ, ನಮ್ಮ ಜನರಿಗೆ ಒಳ್ಳೆಯ ಕೆಲಸ ದಕ್ಕಿಸಿಕೊಳ್ಳಲು ಇಂಗ್ಲಿಷ್ ಭಾಷೆಯ ಕಲಿಕೆ ಬೇಕೋ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆ ಬೇಕೋ ಎಂಬುದನ್ನು ಯೋಚಿಸಬೇಕಾಗಿದೆ.

ಇಂಗ್ಲಿಷಲ್ಲೇ ಕಲಿಸಬಲ್ಲ ಶಿಕ್ಷರೆಲ್ಲಿದ್ದಾರೆ?
ಹಾಗಾಗಿ ಇಂದು ಕನ್ನಡದಲ್ಲಿ ಗಣಿತ ವಿಜ್ಞಾನ ಪರಿಸರದ ಪಾಠ ಕಲಿಸಿ, ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಸರ್ಕಾರ ಮಾಡಬೇಕಿದೆ. ಹಾಗೆ ಮಾಡುತ್ತಲೇ ಕನ್ನಡದ ಕಲಿಕೆಯನ್ನು ಉನ್ನತ ಶಿಕ್ಷಣದವರೆಗೂ ವಿಸ್ತರಿಸಬೇಕಾಗಿದೆ. ಹಾಗಿರುವಾಗ ‘ಮಕ್ಕಳ ಏಳಿಗೆಗಾಗಿ 1ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಮಾಡ್ತೀವಿ’ ಎನ್ನುವುದು ಹುಡುಗಾಟವಾಗುತ್ತದೆ.

10 ವರ್ಷದ ಹಿಂದೆ ಶುರುವಾದ ಇಂಗ್ಲಿಷನ್ನು ಒಂದು ವಿಷಯವಾಗಿ ಕಲಿಸುವ ಯೋಜನೆಯೇ ನುರಿತ ಶಿಕ್ಷಕರ ಕೊರತೆಯಿಂದ ಸಮರ್ಪಕವಾಗಿ ಜಾರಿಯಾಗಿಲ್ಲದಿರುವಾಗ, ಇಷ್ಟು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಬಲ್ಲ ಶಿಕ್ಷಕರು ಎಲ್ಲಿದ್ದಾರೆ ಎಂಬುದನ್ನು ಸರ್ಕಾರ ಯೋಚಿಸಬೇಕು. ರಾಜ್ಯಸರ್ಕಾರ ಕನ್ನಡದಲ್ಲೇ ಎಲ್ಲಾ ಹಂತದ ಶಿಕ್ಷಣವನ್ನು ನೀಡಲು ಯೋಜನೆ ರೂಪಿಸಿ ಜಾರಿಮಾಡಲಿ. ಕನ್ನಡ ಮಾಧ್ಯಮದ ಮಕ್ಕಳಿಗೆ ಅವರ ಆಯ್ಕೆಯ ವಿದೇಶಿ ಭಾಷೆಯನ್ನು ಪ್ರಾಥಮಿಕ ಹಂತದ ನಂತರ ಒಂದು ಭಾಷೆಯಾಗಿ ಕಲಿಸಲು ಏರ್ಪಾಟು ಮಾಡಲಿ.

ಇದು ಬಿಟ್ಟು ತಾನೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಶುರುಮಾಡೋ ಮೂಲಕ, ಕನ್ನಡದ ಮಕ್ಕಳ ಕಲಿಕೆಯನ್ನು ಅವರ ಪರಿಸರದಲ್ಲಿಲ್ಲದ ಭಾಷೆಯೊಂದರಲ್ಲಿ ಮಾಡಿಸುವ ಮೂಲಕ ಒಳ್ಳೇ ಕೆಲಸ - ಒಳ್ಳೇ ಓದು - ಬುದ್ಧಿವಂತಿಗೆ ಎನ್ನುವ ಬಣ್ಣದ ಸಕ್ಕರೆಕಡ್ಡಿಯ ಮಾತುಗಳ ಮೂಲಕ ನಾಡನ್ನು ಏಳಿಗೆಯ ದಾರಿಯಿಂದ ಮತ್ತಷ್ಟು ದೂರ ಒಯ್ಯುವುದು ನಿಶ್ಚಿತ.

ಗೊತ್ತು ಗುರಿ ಇಲ್ಲದ ತೀರ್ಮಾನ
ರಾಜ್ಯಸರ್ಕಾರ ಮುಂದಿನ ಗೊತ್ತುಗುರಿಯಿಲ್ಲದೆ ತೀರಾ ಹತ್ತಿರದ ನೋಟ ಹೊಂದಿದ್ದು, ನಾಡಿನ ಕಲಿಕಾ ವ್ಯವಸ್ಥೆಯನ್ನು ಶಾಶ್ವತವಾಗಿ ಹಾಳುಗೆಡವುವ ಕ್ರಮಕ್ಕೆ ಮುಂದಾಗಿದೆ. ಇಂದು 1ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಶುರುಮಾಡುವ, 28,847 ಶಾಲೆಗಳನ್ನು ವಿಲೀನದ ಹೆಸರಲ್ಲಿ ಮುಚ್ಚುವ ನಡೆಯು ಸಿಬಿಎಸ್‌ಸಿ ಪಠ್ಯಕ್ರಮದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಹಳ್ಳಿಹಳ್ಳಿಯಲ್ಲಿ ಸ್ಥಾಪಿಸುವ ಲಾಬಿಗೆ ಮಣೆಹಾಕುತ್ತಾ ಶಿಕ್ಷಣವೆನ್ನುವುದನ್ನು ಬಡವರಿಂದ ದೂರಮಾಡುತ್ತದೆ.

ಒಂದು ಒಳ್ಳೆಯ ಕಲಿಕಾ ವ್ಯವಸ್ಥೆಯನ್ನು ಕಟ್ಟಬೇಕಾಗಿದ್ದ ಸರ್ಕಾರವು ಈ ರೀತಿ ಆತ್ಮಹತ್ಯಾತ್ಮಕವಾದ ಕ್ರಮಗಳನ್ನು ತೆಗೆದುಕೊಳ್ಳುವುದು ನಾಡಿಗೆ ಒಳಿತಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವತ್ತ ಗಮನಹರಿಸುವುದನ್ನು ಬಿಟ್ಟು ಹೀಗೆ ಶಾಲೆಗಳನ್ನು ಮುಚ್ಚುವುದರಿಂದಾಗಲೀ, ಕಲಿಕಾ ಮಾಧ್ಯಮವನ್ನೇ ಬದಲಾಯಿಸುವುದರಿಂದಾಗಲೀ ಯಾವುದೇ ಉಪಯೋಗವಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಕೂಡಲೇ ಕೈಬಿಡಲಿ! ಈ ಮನ ವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ತಮ್ಮ ಸಂಪುಟ ಸಹೋದ್ಯೋಗಿಗಳ ಮನವೊಲಿಸುತ್ತಾರೆಂಬ ನಂಬಿಕೆ ನಮ್ಮದು.

ಕನ್ನಡಪ್ರಭ - ಆನಂದ್ ಜಿ, ಬೆಂಗಳೂರು,ಬನವಾಸಿ ಬಳಗ

ಕನ್ನಡಪ್ರಭ ಲಿಂಕ್ನಲ್ಲಿ ಈ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿ:  ಕಿರಣ್ ಶಾಗೆ ಹಳ್ಳಿ ಶಾಲೆಗಳ ಸ್ಥಿತಿಯ ಅರಿವಿದೆಯೇ?