ಆದರೆ, ಖಾಕಿಯ ಪಡೆಯ ದಾಳಿಯ ಮುನ್ಸೂಚನೆಯ ಬಗ್ಗೆ ಮಾಹಿತಿ ಅರಿತಿದ್ದ ಆರೋಪಿ ನಾಗರಾಜ ರಾತ್ರೋರಾತ್ರಿ ಮನೆಯಿಂದ ಪರಾರಿ ಯಾಗಿದ್ದು, ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ನಿಂಬಾಳ್ಕರ್‌ ಹೇಳಿದ್ದಾರೆ.
ಬೆಂಗಳೂರು(ಏ.15): ರಾಜಧಾನಿಯಲ್ಲಿ ಮಾಜಿ ರೌಡಿಯೊಬ್ಬನ ಮನೆ ಮೇಲೆ ಶುಕ್ರವಾರ ಹಠಾತ್ ದಾಳಿ ನಡೆಸಿರುವ ಪೊಲೀಸರು, ರದ್ದಾದ 500, 1000 ರು. ಹಳೆ ನೋಟಿನ ಗಣಿಯನ್ನೇ ಅಗೆದಿದ್ದಾರೆ. ಪೊಲೀಸ್ ದಾಳಿಯಲ್ಲಿ ಬರೋಬ್ಬರಿ 14.80 ಕೋಟಿ ರು. ಮೊತ್ತದ ಹಳೆ ನೋಟು ಸಿಕ್ಕಿದೆ. ಮಾಜಿ ಕಾರ್ಪೊರೇಟರ್ ಕೂಡ ಆಗಿರುವ ರೌಡಿಶೀಟರ್ ನಾಗರಾಜ ಅಲಿಯಾಸ್ ನಾಗನ ಮನೆ ಮೇಲೆ ನಡೆದ ದಾಳಿಯಲ್ಲಿ ಪತ್ತೆಯಾದ ಈ ‘ಕ್ಯಾಶ್ಬಾಂಬ್' ರಾಜ್ಯವಷ್ಟೇ ಅಲ್ಲ, ದೇಶವನ್ನೇ ನಿಬ್ಬೆರಗಾಗಿಸಿದೆ.
1)ಶ್ರೀರಾಮಪುರದ ನಾಗನ ಮನೆ 5 ಅಂತಸ್ತಿನದ್ದು. ಅದರ ಸುತ್ತ 4-5 ಸ್ವಂತ ಕಟ್ಟಡಗಳ ಕೋಟೆ. ಪ್ರತಿ ಕಟ್ಟಡದ ಬಾಗಿಲಿಗೆ ಸರಳಿನ ರಕ್ಷಣೆ, 38 ಸಿಸಿಟೀವಿಗಳ ಕಣ್ಗಾವಲು. 1.1 ಕೋಟಿ ವೆಚ್ಚದಲ್ಲಿ 2 ಹೋಮ್ ಥಿಯೇಟರ್ ಸೇರಿ ವೈಭವೋಪೇತ ಬಂಗಲೆ.
4)ನಾಗರಾಜ ಅಲಿಯಾಸ್ ನಾಗ ತಮಿಳುನಾಡಿನ ಧರ್ಮಪುರಿ ಜಿಲ್ಲೆಯವನು. ಈತ 80ರ ದಶಕದಲ್ಲೇ ಭೂಗತ ಲೋಕಕ್ಕೆ ಕಾಲಿಟ್ಟಿದ್ದ. ಸಣ್ಣಪುಟ್ಟಅಪರಾಧ ಕೃತ್ಯಗಳಿಂದ ಕೊಲೆ, ದರೋಡೆಯಂತಹ ಕೃತ್ಯಗಳಲ್ಲಿ ತೊಡಗಿದ್ದ. 20ನೇ ವಯಸ್ಸಿನಲ್ಲೆ ರೌಡಿ ಪಟ್ಟಿಯಲ್ಲಿ ಸೇರ್ಪಡೆ ಗೊಂಡಿದ್ದ. ನಾಡ ಬಾಂಬ್ನ್ನು ಕಿಸೆಯಲ್ಲಿಟ್ಟುಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದ. ಹಣ ಕೊಡದಿದ್ದರೆ ನಾಡಬಾಂಬ್ ಎಸೆಯುತ್ತಿದ್ದ. ಹೀಗಾಗಿ ‘ಬಾಂಬ್ ನಾಗ' ಎಂದು ಕುಖ್ಯಾತ ಪಡೆದಿದ್ದ.
ಸತತ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮೂರು ಬಾಕ್ಸ್ ಹಣ ಮತ್ತು 12 ಬಾಕ್ಸ್ಗಳಲ್ಲಿ ಭೂ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ದಾಳಿ ವೇಳೆ ನಾಗನ ಸಹಚರರಾದ ಮಣಿ ಮತ್ತು ಅಪ್ಪಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ನಾಗನ ವಿರುದ್ಧ ಮತ್ತೆ ‘ರೌಡಿಪಟ್ಟಿ' ತೆರೆಯಲಾಗಿದೆ. ಇದೇ ವೇಳೆ ನಾಗನ ಇಬ್ಬರು ಮಕ್ಕಳ ಮೇಲೂ ರೌಡಿಪಟ್ಟಿತೆರೆಯಲಾಗಿದೆ. ಪರಾರಿಯಾಗಿರುವ ನಾಗನ ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ.
ಮಾ.18 ರಂದು ಉದ್ಯಮಿ ಉಮೇಶ್ ಹಾಗೂ ಸ್ನೇಹಿತರಾದ ಕಿಶೋರ್ ಕುಮಾರ್, ಗಣೇಶ್ ಎಚ್ಬಿಆರ್ ಲೇಔಟ್ ಸಮೀಪ ನಿವೇಶನಗಳನ್ನು ನೋಡಿಕೊಂಡು ಕಾರಿನಲ್ಲಿ ವಾಪಸ್ ತೆರಳುತ್ತಿದ್ದರು. ಇದೇ ವೇಳೆ ಉಮೇಶ್ ಕಾರಿನಲ್ಲಿ 50 ಲಕ್ಷ ಹಳೇ ನೋಟುಗಳಿದ್ದವು. ಮಾರ್ಗ ಮಧ್ಯೆ ನಿರ್ಜನ ಪ್ರದೇಶವೊಂದರಲ್ಲಿ ಇವರನ್ನು ಅಡ್ಡಹಾಕಿದ ರೌಡಿಶೀಟರ್ ನಾಗರಾಜನ ಸಹಚರರು ಮಾರಕಾಸ್ತ್ರಗಳಿಂದ ಬೆದರಿಸಿ ಮೂವರನ್ನು ಅದೇ ಕಾರಿನಲ್ಲಿ ಶ್ರೀರಾಂಪುರದ ನಾಗನ ನಿವಾಸಕ್ಕೆ ಕರೆ ತಂದಿದ್ದರು. ಬಳಿಕ ಉದ್ಯಮಿ ಉಮೇಶ್ ಹಾಗೂ ಸ್ನೇಹಿತ ಕಿಶೋರ್ಗೆ ಪ್ರಾಣ ಬೆದರಿಕೆ ಹಾಕಿ ಅವರ ಬಳಿಯಿದ್ದ . 50 ಲಕ್ಷ ಹಾಗೂ ಅವರ ಬಳಿ ಇದ್ದ ಚಿನ್ನಾಭರಣ ದೋಚಿದ್ದರು.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ನಾಗ ಹಾಗೂ ಆತನ ಸಹಚರರು ಬೆದರಿಕೆ ಒಡ್ಡಿದ್ದರು ಎಂದು ಉಮೇಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಏ.7 ರಂದು ಉಮೇಶ್ ದೂರು ದಾಖಲಿಸಿದ್ದರು. ನಾಗನ ಬಗ್ಗೆ ತಿಳಿದಿದ್ದ ಹೆಣ್ಣೂರು ಪೊಲೀಸರು ಆತನ ಚಲನವಲನದ ಬಗ್ಗೆ ನಿಗಾ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತ ನಿಂಬಾಳ್ಕರ್ ಆರೋಪಿಗಳ ಬಂಧನಕ್ಕೆ ತಂಡವೊಂದನ್ನು ರಚಿಸಿದ್ದರು. ಮಫ್ತಿಯಲ್ಲಿ ಪೊಲೀಸರು ಶ್ರೀರಾಂಪುರದಲ್ಲಿರುವ ನಾಗನ ನಿವಾಸದ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ರೌಡಿ ನಾಗ ‘ಬ್ಲ್ಯಾಕ್ ಆ್ಯಂಡ್ ವೈಟ್' ದಂಧೆಯಲ್ಲಿ ತೊಡಗಿರುವುದು ಪತ್ತೆಯಾಗಿತ್ತು.
ಹೀಗಾಗಿ ರೌಡಿ ನಾಗನ ಮನೆ ಶೋಧಕ್ಕೆ ಪೊಲೀಸರು ನ್ಯಾಯಾಲಯದಿಂದ ವಾರೆಂಟ್ ಪಡೆದು ಶುಕ್ರವಾರ ಬೆಳಗ್ಗೆ 5.30 ಗಂಟೆ ಸುಮಾರಿಗೆ ಈಶಾನ್ಯ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಹಾಗೂ ಹೆಣ್ಣೂರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ 50ಕ್ಕೂ ಪೊಲೀಸರ ತಂಡ ನಾಗನ ಮನೆ ಮತ್ತು ಕಚೇರಿ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ದಾಳಿ ವೇಳೆ ಆರೋಪಿ ಮನೆಯಲ್ಲಿ ಇರಲಿಲ್ಲ. ಪೊಲೀಸರ ದಾಳಿ ಅರಿತು ಆರೋಪಿ ಮೊದಲೇ ಮನೆಯಿಂದ ಪರಾರಿಯಾಗಿದ್ದ ಎಂದು ನಿಂಬಾಳ್ಕರ್ ಹೇಳಿದ್ದಾರೆ. ಆರೋಪಿ ಮನೆ ಮತ್ತು ಕಚೇರಿಯಲ್ಲಿ ಅಪಾರ ಪ್ರಮಾಣ ಭೂ ದಾಖಲೆಗಳು ಪತ್ತೆಯಾಗಿದ್ದು, ಇವುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.
