ಉಡುಪಿಯ ಅಷ್ಟಮಠದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿ ಅಂತ್ಯ

First Published 29, Jul 2018, 9:18 AM IST
Bala sanyas Ends In Udupi Krishna Mutt
Highlights

ಉಡುಪಿಯ ಅಷ್ಟಮಠದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿಯೊಂದನ್ನು ಇದೀಗ ಅಂತ್ಯಗೊಳಿಸಲಾಗಿದೆ. ಶಿರೂರು ಶ್ರೀ ಸಾವಿನ ಬಳಿಕ ಬಾಲ ಸನ್ಯಾಸ ಪದ್ಧತಿಗೆ ಕೊನೆ ಹಾಡಲಾಗಿದೆ. 

ಉಡುಪಿ :  ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಸಹಜ ಮತ್ತು ಅಕಾಲಿಕ ಮರಣ ಉಡುಪಿಯ ಅಷ್ಟ ಮಠಗಳಲ್ಲಿ ಚಾಲ್ತಿಯಲ್ಲಿದ್ದ ‘ಬಾಲ ಸನ್ಯಾಸ’ ಎಂಬ ಪದ್ಧತಿಯನ್ನೇ ಕೊನೆಗಾಣಿಸಿದೆ. ತಮ್ಮ 7 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದು, ಶಿರೂರು ಮಠದ ಪೀಠವನ್ನೇರಿದ ಶ್ರೀ ಲಕ್ಷ್ಮೀವರ ತೀರ್ಥರು, ಇಂದಿನ ಸಾಮಾಜಿಕ ಸ್ಥಿತಿಗತಿಗಳ ನಡುವೆ ಸನ್ಯಾಸವನ್ನು ಪಾಲಿಸಲಾಗದೆ, ಮರಣದ ನಂತರವೂ ಸಾಕಷ್ಟು ಟೀಕೆ, ಅವಮಾನಗಳಿಗೆ ಗುರಿಯಾಗಿ, ಮುಂದೆ ಯಾವ ಸನ್ಯಾಸಿಗೂ ಇಂತಹ ಪರಿಸ್ಥಿತಿ ಬರಬಾರದು ಎಂಬಂತಹ ಮಾದರಿಯೊಂದಕ್ಕೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯ ಅಷ್ಟ ಮಠಾಧೀಶರು ಬಾಲ ಸನ್ಯಾಸ ಪದ್ಧತಿಯನ್ನು ಕೈಬಿಡುವ ಅಲಿಖಿತ ಸಂಹಿತೆ ಯೊಂದನ್ನು ಒಪ್ಪಿಕೊಂಡಿದ್ದಾರೆ.

ಅದರಂತೆ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಿಸುವ ಹೊಣೆಯನ್ನು ಹೊತ್ತಿರುವ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು, 18 ವರ್ಷ ಮೀರಿರುವ, ಉತ್ತಮ ಶಿಕ್ಷಣ ಪಡೆದ, ಸನ್ಯಾಸಿಯಾಗುವ ಇಚ್ಛೆ ಮತ್ತು ಯೋಗ ಇರುವ ವಟುವಿಗೆ ದೀಕ್ಷೆ ನೀಡಿ, ಶಿರೂರು ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಕೂಡ ಇಂದಿನ ಸ್ಥಿತಿಯಲ್ಲಿ ಬಾಲ ಸನ್ಯಾಸ ಪದ್ಧತಿ ಸರಿಯಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲ ಪದವೀಧರ ಯುವಕನನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಅದಮಾರು ಮಠಾಧೀಶರು ಕೂಡ ಎಂಜಿನಿಯರ್ ಪದವೀಧರ ಯುವಕನಿಗೆ ದೀಕ್ಷೆ ನೀಡಿದ್ದಾರೆ.

ಪ್ರಸ್ತುತ ಉಡುಪಿಯ ಎಲ್ಲ ಮಠಗಳಲ್ಲಿರುವ ಹಿರಿಯ ಸ್ವಾಮೀಜಿಗಳು ಬಾಲಸನ್ಯಾಸಿಗಳಾಗಿಯೇ ಪೀಠವನ್ನೇರಿದವರು. ತಾವು ಮುಂದೇ ನಾಗುತ್ತೇವೆ ಎಂಬ ಅರಿವು ಮೂಡುವ ಮೊದಲೇ ಹಿರಿಯರ ನಿರ್ಧಾರ ದಂತೆ ಸನ್ಯಾಸಿಗಳಾದವರು. ನಂತರ ಮಠಗಳಲ್ಲೇ ಶಾಸ್ತ್ರ ಶಿಕ್ಷಣ ಪಡೆದು ಸನ್ಯಾಸ ಎಂದರೇನು ಎಂಬುದನ್ನು ತಿಳಿದು, ಪಾಲಿಸುತ್ತಿರುವವರು.

ಸನ್ಯಾಸಿ ಆದವರು ಬ್ರಹ್ಮಚರ್ಯ ಪಾಲಿಸಬೇಕು, ದುಶ್ಚಟಗಳಿಂದ ದೂರ ಇರಬೇಕು, ಅಷ್ಟಮಠಗಳ ಅಲಿಖಿತ ನಿಯಮಗಳಿಗೆ ಬದ್ಧರಾಗಿಬೇಕು ಇತ್ಯಾದಿ ನಿಯಮಗಳಿವೆ. ಆದರೆ ಶಿರೂರು ಸ್ವಾಮೀಜಿ ಅವರು ಹರೆಯಕ್ಕೆ ಬರುತ್ತಿದ್ದಂತೆ ಇದೆಲ್ಲವನ್ನೂ ಉಲ್ಲಂಘಿಸಿದ್ದರು. ಸ್ವತಃ ಶಿರೂರು ಸ್ವಾಮೀಜಿ ಅವರೇ, ತಮ್ಮನ್ನು ಬಾಲಸನ್ಯಾಸಿಯನ್ನಾಗಿ ಮಾಡಿದರು, ಪ್ರೌಢರಾದ ಮೇಲೆ ಅದನ್ನು ತಮಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಆದರೆ ಬಿಟ್ಟು ಹೊಗು ವುದಕ್ಕೂ ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಶಿರೂರು ಸ್ವಾಮೀಜಿ ಅವರು ಇದ್ದಾಗಲೂ ಕ್ರಾಂತಿಕಾರಿಯೇ ಆಗಿದ್ದರು, ಈಗ ಇಲ್ಲದಿದ್ದಾಗಲೂ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾಗುತ್ತಿದ್ದಾರೆ. 

loader