ಹೈದರಾಬಾದ್[ಫೆ.15]: Valentine's Day ಎಂಬುವುದು ಪಾಶ್ಚಾತ್ಯ ಸಂಸ್ಕೃತಿ ಎಂದು ವಿರೋಧಿಸುವವರು ಹಲವರಿದ್ದಾರೆ. ಇವರಲ್ಲಿ ಭಜರಂಗದಳ ಸಂಘಟನೆಯೂ ಒಂದು. ಪ್ರತಿ ಬಾರಿ ಪ್ರೇಮಿಗಳಿಗೆ ಹೀಗೆ ಮಾಡದಂತೆ ಎಚ್ಚರಿಸುವ ಕಾರ್ಯಕರ್ತರು ಈ ಬಾರಿ ಪ್ರೇಮಿಗಳಿಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಹೈದರಾಬಾದ್ ನ ಹೊರವಲಯದಲ್ಲಿರುವ ಕಂಡಲಾಕೋಯಾ ಆಕ್ಸೀಜನ್ ಪಾರ್ಕ್ ಒಂದರಲ್ಲಿ Valentine's Day ವಿದ್ಯಾರ್ಥಿ ಜೋಡಿಗೆ ಒತ್ತಾಯಪೂರ್ವಕವಾಗಿ ಮಂಗಳ ಸೂತ್ರ ತೊಡಿಸಿ ಮದುವೆ ಮಾಡಿಸಿದ್ದಾರೆ. ಬಳಿಕ ಕಾರ್ಯಕರ್ತರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ವೈರಲ್ ಆಗಿದೆ. ವಿಡಿಯೋದಲ್ಲಿ ಕಾರ್ಯಕರ್ತರು 'ಇದೊಂದು ಬಹಳ ಶುಭದಿನ, ಯಾಕೆಂದರೆ ಈ ಜೋಡಿ ಇಂದು ಒಂದಾಗಿದೆ' ಎಂದಿದ್ದಾರೆ. 

ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಹಾಗೂ ಇನ್ನಿತರ ಸಂಘಟನೆಯ ಕಾರ್ಯಕರ್ತರು ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ವಿಭಿನ್ನ ಪ್ರದೇಶಗಳಲ್ಲಿ Valentine's Day ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಿಲ್ಲಿನ ಎಲ್. ಬಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರ ಒಂದು ಗುಂಪನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇತ್ತ ತೆಲಂಗಾಣದಲ್ಲಿ ಪ್ರೇಮಿಗಳ ದಿನದಂದು ಆಯೋಜಿಸಿದ್ದ ಕಾರ್ಯಕ್ರಮದ ವಿರುದ್ಧವೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರೆನ್ನಲಾಗಿದೆ.