ಸುವರ್ಣನ್ಯೂಸ್ ಜೊತೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಯಾರೇ ಒತ್ತಡ ಹೇರಿದರೂ ಕನ್ನಡಸಂಘಟನೆಗಳ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು(ಏ. 19): ಕನ್ನಡಿಗರನ್ನು ಅವಹೇಳನ ಮಾಡಿದ್ದ 'ಕಟ್ಟಪ್ಪ' ಪಾತ್ರಧಾರಿ ಸತ್ಯರಾಜ್ ವಿರುದ್ಧ ಕನ್ನಡ ಸಂಘಟನೆಗಳು ಮಾಡುತ್ತಿರುವ ಹೋರಾಟ ಕೇವಲ ಹಾರಾಟ-ಕೂಗಾಟಕ್ಕಷ್ಟೇ ಸೀಮಿತವಾಗುತ್ತದೆಯೇ? ಕಟ್ಟಪ್ಪ ಕ್ಷಮೆ ಕೇಳದಿದ್ದರೂ ಬಾಹುಬಲಿ-2 ಕರ್ನಾಟಕದಲ್ಲಿ ಬಿಡುಗಡೆಯಾಗುತ್ತದೆಯೇ? ಇಂತಹ ಕೆಲ ಪ್ರಶ್ನೆಗಳು ಉದ್ಭವಿಸಲು ಕಾರಣವಾದ ಬೆಳವಣಿಗೆ ನಿನ್ನೆಯಿಂದ ಆಗುತ್ತಿದೆ. ಕನ್ನಡಪರ ಸಂಘಟನೆಗಳ ಹೋರಾಟವನ್ನು ಕೈಬಿಡುವಂತೆ ಅಂಬರೀಷ್ ಒಳಗೊಂಡಂತೆ ಸ್ಯಾಂಡಲ್ವುಡ್'ನ ಹಿರಿಯ ನಟರು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ಸುವರ್ಣನ್ಯೂಸ್'ಗೆ ಲಭಿಸಿದೆ. ಕನ್ನಡ ಹೋರಾಟಗಾರರ ಆಕ್ರೋಶದಿಂದ ವಿಚಲಿತರಾಗಿರುವ ಬಾಹುಬಲಿ ನಿರ್ಮಾಪಕರು ಹಿರಿಯ ಕನ್ನಡ ನಟರನ್ನು ಬಳಸಿಕೊಂಡು ಹೋರಾಟಗಾರರ ಮನವೊಲಿಸಲು ಯತ್ನಿಸಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲಿ ತೆಲುಗು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಜೊತೆ ಮಾತಕತೆ ನಡೆಸಿದ್ದು, ಚಿತ್ರ ಬಿಡುಗಡೆಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ. ಸುವರ್ಣನ್ಯೂಸ್'ಗೆ ಈ ನಿಟ್ಟಿನಲ್ಲಿ ಎಕ್ಸ್'ಕ್ಲೂಸಿವ್ ಮಾಹಿತಿ ಲಭಿಸಿದೆ.

ಇನ್ನು, ಸುವರ್ಣನ್ಯೂಸ್ ಜೊತೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಯಾರೇ ಒತ್ತಡ ಹೇರಿದರೂ ಕನ್ನಡಸಂಘಟನೆಗಳ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಬಾಹುಬಲಿ ಸಿನಿಮಾವನ್ನು ವಿರೋಧಿಸುತ್ತಿಲ್ಲ. ಕನ್ನಡಿಗರನ್ನ ಅವಹೇಳನ ಮಾಡಿರುವ ಸತ್ಯರಾಜ್ ಕ್ಷಮೆ ಕೇಳಬೇಕಷ್ಟೇ. ಆ ಕೆಲಸವಾದರೆ ಕನ್ನಡಿಗರು ಬಾಹುಬಲಿಯ ಬಿಡುಗಡೆಗೆ ಅವಕಾಶ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ.