ಕಾಡಿನಿಂದ ನಾಡಿಗೆ ಬಂದು, ತಾಯಿ ಯಿಂದ ಬೇರ್ಪಟ್ಟಿದ್ದ ಆನೆಮರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಬಂಡೀಪುರ ಹುಲಿ ಯೋಜನೆಯ ಓಂಕಾರ ಕಚೇರಿಯಲ್ಲಿ ನಡೆದಿದೆ.

ಗುಂಡ್ಲುಪೇಟೆ: ಕಾಡಿನಿಂದ ನಾಡಿಗೆ ಬಂದು, ತಾಯಿ ಯಿಂದ ಬೇರ್ಪಟ್ಟಿದ್ದ ಆನೆಮರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಬಂಡೀಪುರ ಹುಲಿ ಯೋಜನೆಯ ಓಂಕಾರ ಕಚೇರಿಯಲ್ಲಿ ನಡೆದಿದೆ. ಹೊಸ ವರ್ಷದ ದಿನ ತಾಯಿ ಜೊತೆ ಕುರುಬ ಹುಂಡಿ ಬಳಿಗೆ ಬಂದಿದ್ದ 3 ಆನೆಗಳಲ್ಲಿ ಸುಮಾರು 6 ತಿಂಗಳ ಮರಿಯಾನೆ ಗ್ರಾಮದ ಯುವಕರ ಕೂಗಾಟದ ಹಿನ್ನೆಲೆಯಲ್ಲಿ ತಾಯಿ ಆನೆಯಿಂದ ಬೇರೆಯಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಬೇರ್ಪಟ್ಟ ಆನೆಮರಿಯನ್ನು ಹಿಡಿದು ಓಂಕಾರ ಅರಣ್ಯ ಕಚೇರಿಗೆ ಕರೆತಂದು ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಮಂಗಳವಾರ ಮಧ್ಯಾಹ್ನದ ತನಕ ಇದ್ದು ಪ್ರಾಣ ಕಳೆದುಕೊಂಡಿದೆ.

ಮೃತ ಆನೆಮರಿಯನ್ನು ಇಲಾಖೆಯ ಪಶುವೈದ್ಯ ಡಾ. ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾಡಲ್ಲಿ ಹೂಳಲಾಗಿದೆ ಎಂದು ಅರಣ್ಯಾಧಿಕಾರಿ ನವೀನ್‌ಕುಮಾರ್ ಪತ್ರಿಕೆ ತಿಳಿಸಿದರು. ಮರಿಯಾನೆ ಬೇರ್ಪಟ್ಟ ತಾಯಿ ಆನೆ ಓಂಕಾರ ಅರಣ್ಯದಂಚಿನ ಮಂಚಹಳ್ಳಿ ಗುಡ್ಡದ ಬಳಿ ಘೀಳಾಟ ಸೋಮವಾರ ರಾತ್ರಿ ಕೇಳಿ ಬಂದಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಹೇಳಿದ್ದಾರೆ.

ಕಾಡಿನಿಂದ ಬಂದ ಆನೆಗಳ ಜೊತೆ ಗಿದ್ದ ಆನೆಮರಿ ಬೇರ್ಪಡಲು ಗ್ರಾಮದ ಯುವಕರ ಹುಚ್ಚಾಟವೇ ಕಾರಣವಾಗಿದೆ. ತಾಯಿ ಆನೆಯೊಂದಿಗೆ ಬಿಟ್ಟಿದ್ದರೆ ಆನೆ ಮರಿಯ ಜೀವ ಉಳಿಯುತ್ತಿತ್ತು ಎನ್ನಲಾ ಗುತ್ತಿದೆ. ತಾಯಿ ಆರೈಕೆ ಇಲ್ಲದೆ ಮರಿಯಾನೆ ಸಾವನ್ನಪ್ಪಿದ್ದು, ಪ್ರಾಣಿ ಪ್ರಿಯರಲ್ಲಿ ಆಸಮಾಧಾನಕ್ಕೆ ಕಾರಣವಾಗಿದೆ.