ಬ್ರೆಜಿಲ್ : ಮೃತಪಟ್ಟ ಮಹಿಳೆಯ ಗರ್ಭಕೋಶ ಕಸಿ ಮಾಡಿಸಿಕೊಂಡ ಮಹಿಳೆಯೋರ್ವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  ಈ ರೀತಿಯ ಘಟನೆ ವಿಶ್ವದಲ್ಲೇ ಮೊದಲ ಬಾರಿಯಾಗಿದೆ. 

ಹಿಂದೆ ಅನೇಕ ದೇಶಗಳಲ್ಲಿ ಮೃತ ಮಹಿಳೆಯರ ಗರ್ಭಕೋಶವನ್ನು ಇನ್ನೋರ್ವ ಮಹಿಳೆಗೆ ಕಸಿ ಮಾಡಲಾಗಿತ್ತು.  10 ಬಾರಿ ಈ ರೀತಿ ಗರ್ಭಕೋಶದ ಕಸಿ ಯತ್ನಗಳು ನಡೆದಿದ್ದು, ಇದೀಗ 11ನೇ ಯತ್ನ ಸಫಲವಾಗಿ ಹೊಸ ಮೈಲುಗಲ್ಲು ಬರೆಯಲಾಗಿದೆ. ಈ ರೀತಿ ಜನಿಸಿದ ಮಗು 2.7 ಕೆಜಿಯಷ್ಟಿದೆ. 

ಗರ್ಭಕೋಶದ ಕಸಿ ಯತ್ನವು ಮೊದಲ ಬಾರಿಗೆ 2013ರಲ್ಲಿ ನಡೆದಿತ್ತು.  2018ರಲ್ಲಿ ಈ ಯತ್ನ ಸಫಲವಾಗಿದೆ. 

8 ಗಂಟೆಗಳ ಕಾಲ ಯಾವುದೇ ಆಮ್ಲಜನಕ ಪೂರೈಕೆ ಇಲ್ಲದೆ 32 ವರ್ಷದ ಮಹಿಳೆಗೆ ಗರ್ಭಕೋಶವನ್ನು  2016ರ ಸೆಪ್ಟೆಂಬರ್ ತಿಂಗಳಲ್ಲಿ ಕಸಿ ಮಾಡಲಾಗಿತ್ತು. 45 ವರ್ಷದ ಮೆದುಳು ನಿಷ್ಕ್ರೀಯವಾದ ಮಹಿಳೆಯ ಗರ್ಭಕೋಶವನ್ನು ಈಕೆಗೆ ಕಸಿ ಮಾಡಲಾಗಿದ್ದು, ಬಳಿಕ ಆಕೆಗೆ ಫಲವತ್ತಾದ ಮೊಟ್ಟೆಗಳನ್ನು ಕಸಿ ಮಾಡಿ ಮಗುವನ್ನು ಪಡೆಯಲಾಗಿದೆ.