ನವದೆಹಲಿ[ನ.21]: ಸುಪ್ರೀಂ ಕೋರ್ಟ್‌ ತೀರ್ಪಿಗಾಗಿ ಕಾಯದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಹಿಂದು ಸಂಘಟನೆಗಳ ಕೂಗು ವ್ಯಾಪಕವಾಗಿರುವಾಗಲೇ, ಅಂತಹ ಸುಗ್ರೀವಾಜ್ಞೆ ಜಾರಿಗೆ ತಂದರೆ ತನ್ನ ಅಭ್ಯಂತರವಿಲ್ಲ ಎಂದು ಅಯೋಧ್ಯೆ ವಿವಾದದ ಅರ್ಜಿದಾರರಲ್ಲಿ ಒಬ್ಬರಾಗಿರುವ ಇಕ್ಬಾಲ್‌ ಅನ್ಸಾರಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ರಾಮಮಂದಿರ ನಿರ್ಮಾಣಕ್ಕಾಗಿ ಅಧ್ಯಾದೇಶ ಹೊರಡಿಸಿದರೆ ತಮ್ಮ ಆಕ್ಷೇಪ ಇಲ್ಲ. ಆ ಸುಗ್ರೀವಾಜ್ಞೆಯಿಂದ ದೇಶಕ್ಕೆ ಒಳ್ಳೆಯದಾಗುತ್ತೆ ಎಂದಾದರೆ ಜಾರಿಗೆ ತನ್ನಿ. ನಾವು ಕಾನೂನು ಪಾಲಿಸುವ ನಾಗರಿಕರು. ಪ್ರತಿ ಕಾನೂನನ್ನೂ ಪಾಲಿಸುತ್ತೇವೆ ಎಂದು ಅನ್ಸಾರಿ ಅವರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಯೋಧ್ಯೆ ಕುರಿತ ಅರ್ಜಿ ವಿಚಾರಣೆಯನ್ನು 2019ರ ಜನವರಿವರೆಗೆ ಸುಪ್ರೀಂಕೋರ್ಟ್‌ ಮುಂದೂಡಿತ್ತು. ಲೋಕಸಭೆ ಚುನಾವಣೆಗೂ ಮುನ್ನ ತೀರ್ಪು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಹಿಂದು ಸಂಘಟನೆಗಳಿಗೆ ತೀವ್ರ ನಿರಾಸೆ ಆಗಿತ್ತು. ಈ ಹಿನ್ನೆಲೆಯಲ್ಲಿ ತೀರ್ಪಿಗಾಗಿ ಕಾಯದೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಆಗ್ರಹ ಇಟ್ಟಿದ್ದವು. ಇದೇ ವಿಷಯವಾಗಿ ಆರ್‌ಎಸ್‌ಎಸ್‌, ವಿಶ್ವ ಹಿಂದು ಪರಿಷತ್‌ ಹಾಗೂ ಶಿವಸೇನೆ ನ.25ರಂದು ಅಯೋಧ್ಯೆಯಲ್ಲಿ ರಾರ‍ಯಲಿ ಆಯೋಜಿಸಿವೆ.

ವಿಎಚ್‌ಪಿ, ಬಿಜೆಪಿ ರಾರ‍ಯಲಿಯಿಂದ ಸ್ಥಳೀಯ ಮುಸ್ಲಿಮರಲ್ಲಿ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾರ‍ಯಲಿ ನಡೆಯುವ ವೇಳೆಗೆ ನಗರ ಬಿಟ್ಟು ತೆರಳಲು ಸ್ಥಳೀಯ ಮುಸ್ಲಿಮರು ಚಿಂತಿಸಿದ್ದಾರೆ ಎಂದು ಇತ್ತೀಚೆಗಷ್ಟೇ ಅನ್ಸಾರಿ ಹೇಳಿದ್ದರು.