ಆನೇಕಲ್‌ [ಜು.29] :  ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿಯಾಗಿದ್ದು, ಅಳಿನಂಚಿನಲ್ಲಿದೆ. ದೇಶಾದ್ಯಂತ ಸುಮಾರು 4 ಸಾವಿರಕ್ಕಿಂತ ಕಡಿಮೆ ಹುಲಿಗಳಿವೆ. ಕಳ್ಳ ಬೇಟೆ, ಹುಲಿಗಳ ನಡುನ ವೈರತ್ವ, ಪರಿಸರ ನಾಶ ಹಾಗೂ ಇತರ ಕಾರಣಗಳಿಗಾಗಿ ಹುಲಿಗಳ ಸಂತತಿ ಕ್ಷೀಣವಾಗಿದೆ. ಅವುಗಳ ರಕ್ಷಣೆ ಜೈವಿಕ ಸಮತೋಲನಕ್ಕೆ ಅವಶ್ಯವಾಗಿದೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಡಾ.ಡಿ.ಎಸ್‌.ರವೀಂದ್ರ ತಿಳಿಸಿದರು.

ಅವರು ಬನ್ನೇರುಘಟ್ಟಜೈವಿಕ ಉದ್ಯಾನವನದಲ್ಲಿ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ರಾಯಲ್‌ ಬೆಂಗಾಲ್‌ ತಳಿಯ 8 ಹುಲಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆ ಮಾಡಿ ಮಾತನಾಡಿದರು. ಮನುಷ್ಯರ ಸ್ವಾರ್ಥದಿಂದಾಗಿ ಹಲವಾರು ಪ್ರಾಣಿ ಪಕ್ಷಿಗಳ ನಾಶವಾಗುತ್ತಿದ್ದು, ಇನ್ನು ಮುಂದೆ ಇವುಗಳ ಸಂತತಿವೃದ್ಧಿಗೆ ಬೇಕಾದ ಪರಿಸರವನ್ನು ಸೃಷ್ಟಿಸಬೇಕಿದೆ ಎಂದರು.

ಹುಲಿ ಮರಿಗೆ ಹಿಮಾದಾಸ್‌ ಹೆಸರು:

ಇದೇ ಸಂದರ್ಭದಲ್ಲಿ 6 ತಿಂಗಳ ಹುಲಿ ಮರಿಯೊಂದಕ್ಕೆ ಏಷಿಯನ್‌ ಗೇಮ್ಸ್‌ನ ಚಿನ್ನದ ಹುಡುಗಿ ಹಿಮಾ ದಾಸ್‌ ಅವರ (ಹಿಮಾ) ಹೆಸರನ್ನು ಇಡಲಾಯಿತು. ಹುಲಿಗಳ ಮಾಹಿತಿಯ ಹಲವು ಚಿತ್ರಗಳನ್ನು ಪ್ರದರ್ಶಿಸಲಾಯಿತು. ಹುಲಿ ಆವರಣದಲ್ಲಿ ಹೆಚ್ಚಿನ ಮಾಹಿತಿಯನ್ನು ಇಡಲಾಗಿದ್ದು, ಆಸಕ್ತರು ತಿಳಿಯಬಹುದು ಎಂದು ಉದ್ಯಾನವನದ ಆಡಳಿತಾಧಿಕಾರಿಗಳು ಮಾಹಿತಿ ನೀಡಿದರು.

ಒಂದು ತಾಯಿ ಹುಲಿ , 7 ತಿಂಗಳ 4 ಮರಿಗಳು, ಎರಡುವರೆ ವರ್ಷದ 3 ಮರಿಗಳನ್ನು ಮೊದಲ ಬಾರಿಗೆ ಜನರ ವೀಕ್ಷಣೆಗೆ ಅವಕಾಶ ನೀಡಲಾಯಿತು. ಈ ಎಲ್ಲ ಮರಿಗಳು ಬನ್ನೇರುಘಟ್ಟದಲ್ಲೇ ಹುಟ್ಟಿರುವುದು ವಿಶೇಷ. ಇದರಲ್ಲಿ 4 ಹೆಣ್ಣು, 3 ಗಂಡು ಮರಿಗಳಾಗಿವೆ.