ನವದೆಹಲಿ :  ಐಟಿ ದಿಗ್ಗಜ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರು ತಮ್ಮ ವಿಪ್ರೋ ಷೇರಿನ ವಹಿವಾಟಿನಿಂದ ಬಂಧ ಆರ್ಥಿಕ ಲಾಭದಲ್ಲಿನ ಶೇ.34ರಷ್ಟುಹಣವನ್ನು ಸಮಾಜಸೇವೆಗೆ ಮೀಸಲಿರಿಸಿದ್ದಾರೆ. ಇದರ ಮೌಲ್ಯ 52,750 ಕೋಟಿ ರು. ಆಗಿದ್ದು, ತಮ್ಮದೇ ಆದ ‘ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ’ಕ್ಕೆ ಇಷ್ಟೊಂದು ಮೊತ್ತವನ್ನು ಲೋಕೋಪಕಾರಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ಅಜೀಂ ಪ್ರೇಮ್‌ಜಿ ಪ್ರತಿಷ್ಠಾನವು ಸಮಾಜಸೇವಾ ಕೆಲಸಗಳಲ್ಲಿ ತೊಡಗಿಕೊಂಡಿದೆ. ಈ ಹಿಂದೆ ಕೂಡ ಅವರು ಸಮಾಜಸೇವೆಗೆ ಹಣ ನೀಡಿದ್ದರು. ಈಗ ನೀಡಿರುವ ದೇಣಿಗೆಯೊಂದಿಗೆ ಪ್ರೇಮ್‌ಜಿ ಅವರು ಪ್ರತಿಷ್ಠಾನಕ್ಕೆ ನೀಡಿದ ದೇಣಿಗೆಯ ಮೊತ್ತ 1.45 ಲಕ್ಷ ಕೋಟಿ ರು. ಆದಂತಾಗಿದೆ. ಇದರಲ್ಲಿ ವಿಪ್ರೋ ಕಂಪನಿಯ ಆರ್ಥಿಕ ಮಾಲೀಕತ್ವದ ಹಣ ಕೂಡ ಸೇರಿದೆ.

ಬುಧವಾರ ಈ ಬಗ್ಗೆ ಘೋಷಣೆಯೊಂದನ್ನು ಮಾಡಿರುವ ಪ್ರೇಮ್‌ಜಿ, ‘ಸಮಾಜಸೇವೆಗೆ ಬದ್ಧತೆ ವ್ಯಕ್ತಪಡಿಸಿ ನೀಡಿರುವ ಹಣದ ಪ್ರಮಾಣವನ್ನು ನಾನು ಹೆಚ್ಚಿಸಿದ್ದೇನೆ. ನನ್ನ ವೈಯಕ್ತಿಕ ಆಸ್ತಿಯಲ್ಲಿನ ಹಣವನ್ನು ಬಿಟ್ಟುಕೊಟ್ಟು ಸಮಾಜಸೇವೆಗೆ ಹೆಚ್ಚು ಹಣ ನೀಡುತ್ತಿದ್ದೇನೆ’ ಎಂದಿದ್ದಾರೆ.

2018ರ ಅಂಕಿ-ಅಂಶಗಳ ಅನುಸಾರ ಪ್ರೇಮ್‌ಜಿ ಅವರು ವಿಪ್ರೋದಲ್ಲಿ ಶೇ.74.3ರಷ್ಟುಪಾಲು ಹೊಂದಿದ್ದಾರೆ.

ಪ್ರೇಮ್‌ಜಿ ಪ್ರತಿಷ್ಠಾನವು ಕರ್ನಾಟಕ, ಉತ್ತರಾಖಂಡ, ರಾಜಸ್ಥಾನ, ಛತ್ತೀಸಗಢ, ಪುದುಚೇರಿ, ತೆಲಂಗಾಣ, ಈಶಾನ್ಯ ಹಾಗೂ ಮಧ್ಯಪ್ರದೇಶದಲ್ಲಿ ಸರ್ಕಾರಿ ಸಹಭಾಗಿತ್ವದಲ್ಲಿ ಸಮಾಜಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ.