ನವದೆಹಲಿ[ಜು.19]: ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕವೇ ಇತ್ಯರ್ಥ ಪಡಿಸಲು ರಚಿಸಲಾಗಿರುವ ಸಮಿತಿಗೆ ತನ್ನ ಕೆಲಸವನ್ನು ಮುಂದುವರೆಸಿಕೊಂಡು ಹೋಗಲು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಅನುಮತಿ ನೀಡಿದೆ. ಅಲ್ಲದೆ ಆ.1ರಂದು ಮುಂದಿನ ಸ್ಥಿತಿಗತಿ ವರದಿಯನ್ನು ತನ್ನ ಮುಂದಿಡುವಂತೆ ಸಮಿತಿಯನ್ನು ಕೋರಿದೆ.

ಈ ವರದಿ ಪರಿಶೀಲಿಸಿದ ಬಳಿಕ ಪ್ರಕರಣ ಕುರಿತು ಮುಂದಿನ ವಿಚಾರಣೆ ಅಗತ್ಯವಿದೆಯೇ ಎಂಬುದರ ಬಗ್ಗೆ ಆ.2ರಂದು ತಾನು ಪರಿಶೀಲಿಸುವುದಾಗಿ ಪೀಠ ಸ್ಪಷ್ಟಪಡಿಸಿದೆ.

ಸಂಧಾನಕ್ಕೆಂದು ರಚಿಸಲಾಗಿರುವ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ. ಖಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಮಿತಿಯಿಂದ ಯಾವುದೇ ಹೆಚ್ಚಿನ ಪ್ರಗತಿ ಆಗಿಲ್ಲ. ಹೀಗಾಗಿ ಸ್ವತಃ ಸುಪ್ರೀಂಕೋರ್ಟ್‌, ಪ್ರಕರಣದ ವಿಚಾರಣೆ ಮುಂದುವರೆಸಬೇಕು ಎಂದು ಅಯೋಧ್ಯೆ ಪ್ರಕರಣದ ಮೂಲ ಅರ್ಜಿದಾರರೊಬ್ಬರು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸಮಿತಿಗೆ ಸುಪ್ರೀಂಕೋರ್ಟ್‌ ಸೂಚಿಸಿತು. ಆ ಸಮಿತಿಯ ವರದಿ ಪರಿಶೀಲಿಸಿದ ನ್ಯಾಯಾಲಯ ಗುರುವಾರ ಈ ಮಹತ್ವದ ಆದೇಶ ಹೊರಡಿಸಿದೆ.