ಲಕ್ನೋ[ಮೇ.22]: ಅಯೋಧ್ಯೆಯಲ್ಲಿ ಕಾರ್ತಿಕೇಯ ಬಾಬಾ ಆಶ್ರಮ ನಡೆಸುತ್ತಿದ್ದ ಗೋಶಾಲೆಯೊಂದರಲ್ಲಿ ಗೋವುಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. 

ಕಾರ್ತಿಕೇಯ ಬಾಬಾ ಆಶ್ರಮದಡಿಯಲ್ಲಿ ನಿರ್ಮಿಸಲಾಗಿರುವ ಗೋಶಾಲೆಯಲ್ಲಿ ರಾಜ್‌ಕುಮಾರ್ ಎಂಬಾತ ಗೋವುಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ವೇಳೆ ಇಲ್ಲಿನ ಸ್ವಯಂ ಸೇವಕರ ಕೈಯ್ಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾನೆ. 

ಗೋಶಾಲೆಯ ಮೇಲೆ ಕಣ್ಗಾವಲಿಟ್ಟಿದ್ದ ಸ್ವಯಂಸೇವಕರಿಗೆ ಸಿಸಿಟಿವಿ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬ ಗೋವುಗಳನ್ನು ರೇಪ್ ಮಾಡಿದ ದೃಶ್ಯಗಳು ಕಂಡು ಬಂದಿದ್ದವು. ಆದರೆ ಕೆಲವೇ ಸಮಯದಲ್ಲಿ ಗೋಶಾಲೆಗೆ ಮರಳಿ ಬಂದ ಆ ವ್ಯಕ್ತಿ ಮತ್ತೆ ಗೋವುಗಳ ಮೇಲೆ ರೇಪ್ ನಡೆಸಲು ಮುಂದಾದಾಗ ಸ್ವಯಂಸೇವಕರು ಆತನನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ. ಈತನನ್ನು ಪೊಲೀಸರಿಗೊಪ್ಪಿಸುವ ಮೊದಲು ಸ್ಥಳೀಯರು ಭರ್ಜರಿಯಾಗಿ ಥಳಿಸಿದ್ದಾರೆ.

ರಾಜ್‌ಕುಮಾರ್‌ನನ್ನು ಬಂಧಿಸಿರುವ ಪೊಲೀಸರು ಪ್ರಾಣಿಗಳ ಮೇಲೆ ಕ್ರೂರತೆ ಮೆರೆದಿರುವ ಆರೋಪದಡಿಯಲ್ಲಿ ಐಪಿಸಿ ಸೆಕ್ಷನ್ 376 ಹಾಗೂ 511ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

ಘಟನೆಯ ಕುರಿತಾಗಿ ವಿವರಿಸಿರುವ ಕಾರ್ತಿಕೇಯ ಬಾಬಾ ಆಶ್ರಮದ ಅರ್ಚಕ 'ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿಯೊಬ್ಬ ಏಳು ಗೋವುಗಳೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವುದು ಗಮನಕ್ಕೆ ಬಂತು. ಈ ಕುರಿತಾಗಿ ಕೂಡಲೇ ಪೊಲೀಸರುಗೆ ಮಾಹಿತಿ ನೀಡಿದೆವು' ಎಂದು ಕಂಬನಿ ಮಿಡಿದಿದ್ದಾರೆ.

ಘಟನೆಯ ಕುರಿತಾಗಿ ಮಾತನಾಡಿರುವ ಬಂಧಿತ ವ್ಯಕ್ತಿ 'ನಾನು ಕುಡಿದಿದ್ದೆ, ಮತ್ತಿನಲ್ಲಿ ನಾನೇನು ಮಾಡಿದೆ ಎಂಬುವುದೇ ತಿಳಿದಿಲ್ಲ. ಹಲವಾರು ಮಂದಿ ನನ್ನನ್ನು ಥಳಿಸಿ ಪೊಲೀಸರಿಗೊಪ್ಪಿಸಿದ್ದರೆಂಬುವುದಷ್ಟೇ ನೆನಪಿದೆ' ಎಂದಿದ್ದಾನೆ.