ವಿಂಗ್ ಕಮಾಂಡರ್ ಮೇಲೆ ಆಟೋ ಚಾಲಕನ ಹಲ್ಲೆ
ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಓರ್ವರ ಮೇಲೆ ಆಟೋ ಚಾಲಕರೋರ್ವರು ಹಲ್ಲೆ ಮಾಡಿದ ಘಟನೆ ನಡೆದಿದೆ.
ಬೆಂಗಳೂರು : ‘ವಿಂಗ್ ಕಮಾಂಡರ್’ ಒಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕ ಸೇರಿ ಮೂವರು ಹಲ್ಲೆ ನಡೆಸಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಿ.ವಿ.ರಾಮನ್‌ನಗರ ನಿವಾಸಿ ವಿಂಗ್‌ಕಮಾಂಡರ್ ವಿ.ಎಸ್.ರಾವ್ (46) ಹಲ್ಲೆಗೊಳಗಾದವರು. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಆಟೋ ರಿಕ್ಷಾ ಚಾಲಕ ಹಾಗೂ ಇತರ ಪ್ರಯಾಣಿಕರ ಮೇಲೆ ವಿಂಗ್‌ಕಮಾಂಡರ್ ದೂರು ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ವಿ.ಎಸ್.ರಾವ್ ಮೇ 4ರಂದು ಸಂಜೆ 5.30ರ ಸುಮಾರಿಗೆ ಇಂದಿರಾನಗರದ 100 ಅಡಿಯಲ್ಲಿ ತಮ್ಮ ಪತ್ನಿ ಜತೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಆಟೋ ರಿಕ್ಷಾ ಚಾಲಕ ಏಕಾಏಕಿ ಆಟೋವನ್ನು ಕಾರಿಗೆ ಅಡ್ಡ ಹಾಕಿ ರಸ್ತೆ ಮಧ್ಯೆ ತಡೆದು ನಿಲ್ಲಿಸಿದ್ದ. ಇದರಿಂದ ಆತಂಕಗೊಂಡ ವಿಂಗ್‌ಕಮಾಂಡರ್ ರಾವ್ ಅವರು ಕಾರಿನಿಂದ ಕೆಳಗೆ ಇಳಿದು ಬಂದು ಆಟೋ ಚಾಲಕನನ್ನು ಪ್ರಶ್ನಿಸಿದ್ದರು. ರಸ್ತೆ ಮಧ್ಯೆ ಅಡ್ಡಲಾಗಿ ಕಾರು ಓಡಿಸುತ್ತಿದ್ದೀಯಾ ಎಂದು ವಿಂಗ್‌ಕಮಾಂಡರ್‌ರನ್ನು ಆಟೋ ಚಾಲಕ ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಈ ವಿಚಾರಕ್ಕೆ ಆಟೋ ಚಾಲಕ ಮತ್ತು ವಿ.ಎಸ್.ರಾವ್ ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಆಟೋ ಚಾಲಕ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಆಟೋದಲ್ಲಿದ್ದ ಸುಮಾರು 20 ರಿಂದ 25 ವರ್ಷ ವಯಸ್ಸಿನ ಇಬ್ಬರು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ವಾಯುಪಡೆ ಅಧಿಕಾರಿ ಮೇ 6 ರಂದು ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಸಂಚಾರ ವಿಚಾರಕ್ಕೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ವಿಂಗ್ ಕಮಾಂಡರ್ ವಿ.ಎಸ್.ರಾವ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹಲ್ಲೆ ನಡೆಸಿದ ಆರೋಪಿಗಳಿದ್ದ ಆಟೋ ಸಂಖ್ಯೆ ಕೆಎ03 ಎಬಿ1917 ಸಂಖ್ಯೆ ಪತ್ತೆ ಹಚ್ಚಿದ್ದೇವೆ. ಆದರೆ ಆರ್‌ಟಿಓಗೆ ನೀಡಿರುವ ವಿಳಾಸದಲ್ಲಿ ಆರೋಪಿ ಚಾಲಕ ವಾಸ ಇಲ್ಲ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.