ನವದೆಹಲಿ, (ಡಿ.14): ಇಂಗ್ಲಿಷ್‌ ಭಾಷೆಯ ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಪುರಸ್ಕೃತ ಅಮಿತಾವ್ ಘೋಷ್, ಈ ಬಾರಿ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. 

ನವದೆಹಲಿಯಲ್ಲಿ ಶುಕ್ರವಾರ ಜ್ಞಾನಪೀಠ ಪ್ರಶಸ್ತಿ ಸಮಿತಿ ಅವಿರೋಧವಾಗಿ ಘೋಷ್ ಅವರನ್ನು 54ನೇ ಜ್ಞಾನಪೀಠ ಪ್ರಶಸ್ತಿಗಾಗಿ ಆಯ್ಕೆ ಮಾಡಿತು.

2007ರಲ್ಲಿ ಅಮಿತಾವ್ ಘೋಷ್ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿತ್ತು. ಅಷ್ಟೇ ಅಲ್ಲದೇ ಎರಡು ವರ್ಷಗಳ ಹಿಂದೆ 'ಟಾಟಾ ಲಿಟರೇಚರ್ ಲಿವ್' ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದರು.

ದಿ ಶಾಡೋ ಲೈನ್ಸ್, ಸೀ ಆಫ್ ಪೊಪ್ಪೀಸ್, ಡಿ ಸರ್ಕಲ್ ಆಫ್ ರೀಸನ್, ಡಿ ಕಲ್ಕತ್ತಾ ಕ್ರೋಮೋಸೋಮ್, ರಿವರ್ ಆಫ್ ಸ್ಮೋಕ್ ಮುಂತಾದ ಕಾದಂಬರಿಗಳನ್ನು ಅವರು ರಚಿಸಿದ್ದಾರೆ.

'ಡಿ ಗ್ರೇಟ್ ಡಾಕ್ಯುಮೆಂಟ್', ಇನ್ ಆನ್ ಆಂಟಿಕ್ ಲ್ಯಾಂಡ್' ಮುಂತಾದ ನಾನ್ ಫಿಕ್ಷನ್ ಪ್ರಕಾರದ ಕೃತಿಗಳನ್ನೂ ಬರೆದಿದ್ದಾರೆ. 1956ರಲ್ಲಿ ಅಮಿತಾವ್ ಘೋಷ್ ಕೋಲ್ಕತಾ ಮತ್ತು ಬಾಂಗ್ಲಾದೇಶಗಳಲ್ಲಿ ಬೆಳೆದಿದ್ದರು. ಪ್ರಸ್ತುತ ಅವರು ನ್ಯೂಯಾರ್ಕ್ ಹಾಗೂ ಗೋವಾದಲ್ಲಿ ನೆಲೆಸಿದ್ದಾರೆ.