ಬೆಂಗಳೂರು :  ಅರೆ ಬೆತ್ತಲೆಯಾಗಿ ಕೈಯಲ್ಲಿ ಕಲ್ಲುಗಳನ್ನು ಹಿಡಿದ ಆಗಂತುಕರು ಕಳ್ಳತನಕ್ಕೆ ಯತ್ನಿಸಿ ಬನ್ನೇರುಘಟ್ಟದ ಸಮೀಪದ ಹಲವು ಮನೆಗಳ ಬಳಿ ಓಡಾಡಿದ್ದು, ಈ ಭಾಗದಲ್ಲಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆಗಂತುಕರು ಓಡಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮಸ್ಥರು ಬನ್ನೇರುಘಟ್ಟ ಪೊಲೀಸರಿಗೆ ದೂರು ನೀಡಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಜೂ.7 ರ ರಾತ್ರಿ ಅರೆ ಬೆತ್ತಲೆಯಾಗಿದ್ದ ಮೂವರು ದುಷ್ಕರ್ಮಿಗಳು ಮುಖಕ್ಕೆ ಬಿಳಿ ಬಟ್ಟೆ ಕಟ್ಟಿಕೊಂಡು, ಕೈಯಲ್ಲಿ ಕಲ್ಲುಗಳನ್ನು ಹಿಡಿದು ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ತಡರಾತ್ರಿ ವೇಳೆ ಓಡಾಡಿದ್ದಾರೆ. ಆದರೆ ಯಾವುದೇ ಮನೆಗೂ ನುಗ್ಗಿಲ್ಲ. ಮೊದಲು ಅರೆ ಬೆತ್ತಲಾಗಿ ಬಂದ ಮೂರ್ನಾಲ್ಕು ಮಂದಿ, ಬಳಿಕ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರು.  ಕಳವು  ಮಾಡಲು ಬಂದಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಬಾರದೆಂಬ ಕಾರಣಕ್ಕೆ ಕೈಯಲ್ಲಿ ಕೋಲು ಹಿಡಿದು ಸಿಸಿಟಿವಿಗಳನ್ನು ಒಡೆದು ಹಾಕಲು ಯತ್ನಿಸಿದ್ದಾರೆ.

ಕಳವು ಮಾಡಲು ಸಾಧ್ಯವಾಗದಾಗ ಹಾಗೇ ತೆರಳಿದ್ದಾರೆ. ಹೀಗೆ ಮೂರ‌್ನಾಲ್ಕು ಮನೆಯ ಬಳಿ ದುಷ್ಕರ್ಮಿಗಳ ತಂಡ ಓಡಾಡಿದೆ. ಒಂದು ಮನೆಯಲ್ಲಿ ದುಷ್ಕರ್ಮಿಗಳ ಕೃತ್ಯದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಕಂಡ ಮನೆ ಮಾಲೀಕರು ಕೂಡಲೇ ಬನ್ನೇರುಘಟ್ಟ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ  ಬನ್ನೇರು ಘಟ್ಟ ಪೊಲೀಸರು ಸಿಸಿಟಿವಿಯನ್ನು ವಶಕ್ಕೆ ಪಡೆದು ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ. ಕಳ್ಳತನಕ್ಕೆ ಬಂದು ಪರಾರಿಯಾಗುವ ಸಂದರ್ಭದಲ್ಲಿ ಯಾರ ಕೈಗೂ ಸಿಗಬಾರದೆಂಬ ಕಾರಣಕ್ಕೆ ಅರೆ ಬೆತ್ತಲೆಯಾಗಿ ಬಂದಿರುವ ಸಾಧ್ಯತೆ ಇದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.