Asianet Suvarna News Asianet Suvarna News

ಸರ್ಕಾರ ರಚನೆ ಸುಳಿವು ನೀಡಿದ ಬಿಎಸ್ ವೈ : ಬಿಜೆಪಿಯೆಡೆಗೆ ಮೈತ್ರಿ ಶಾಸಕರು?

ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಹೊಸದಾದ ಸುಳಿವೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಮತ್ತೆ ಮೈತ್ರಿ ಶಾಸಕರ ಪಕ್ಷಾಂತರದ ಲಕ್ಷಣಗಳು ಕಂಡು ಬರುತ್ತಿವೆ. 

Atmosphere for BJP to form govt in Karnataka
Author
Bengaluru, First Published Jun 30, 2019, 12:51 PM IST

ಬೆಂಗಳೂರು [ಜೂ.30] :  ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಆದರೆ, ಮೈತ್ರಿ ಸರ್ಕಾರದ ಅಂಗಪಕ್ಷಗಳ ಶಾಸಕರೇ ಕಚ್ಚಾಡಿಕೊಂಡು ಸರ್ಕಾರ ಅಸ್ಥಿರಗೊಳಿಸಿದರೆ ಬಿಜೆಪಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಮೈತ್ರಿ ಸರ್ಕಾರದ ಶಾಸಕರನ್ನು ನಾವು ಕರೆಯುವುದಿಲ್ಲ, ಅವರಾಗಿಯೇ ಬಂದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತೆ ಬಿಜೆಪಿ ಸರ್ಕಾರ ರಚನೆಯ ಪ್ರಯತ್ನ ನಡೆಸುವ ಸುಳಿವನ್ನು ನೀಡಿದ್ದಾರೆ.

ವಿಜಯನಗರದ ಬಂಟರ ಸಂಘದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 105 ಸ್ಥಾನ ಮತ್ತು ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆಲುವು ಸಾಧಿಸಿರುವ ಬಿಜೆಪಿಗೆ ಮತದಾರರ ಆಶೀರ್ವಾದ ಇದೆ. ಸರ್ಕಾರ ರಚನೆ ಮಾಡುವಷ್ಟುಸಂಖ್ಯಾಬಲ ಇಲ್ಲದಿದ್ದರೂ, ಅಪವಿತ್ರ ಮೈತ್ರಿ ವಿರುದ್ಧ ಜನಾದೇಶ ಬಂದಿದೆ. ಮೈತ್ರಿ ಸರ್ಕಾರದ ಆಡಳಿತ ವಿರುದ್ಧ ಮಿತ್ರ ಪಕ್ಷದ ನಾಯಕರೇ ಅಸಮಾಧಾನಗೊಂಡಿದ್ದಾರೆ. ಅವರೇ ಕಚ್ಚಾಡಿಕೊಂಡು ಸರ್ಕಾರ ಪತನಗೊಳಿಸಿದರೆ ಅಧಿಕ ಸಂಖ್ಯಾಬಲ ಇರುವ ಬಿಜೆಪಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವಾಗಿಯೇ ಯಾವ ಶಾಸಕರನ್ನು ಪಕ್ಷಕ್ಕೆ ಆಹ್ವಾನಿಸುವುದಿಲ್ಲ. ಶಾಸಕರೇ ಆಗಮಿಸಿದರೆ ನಾವು ಜವಾಬ್ದಾರರಲ್ಲ ಎಂದು ಹೇಳಿದರು.

ಅಭಿವೃದ್ಧಿಯ ಕಡೆ ಸರ್ಕಾರ ಗಮನ ಹರಿಸುವ ಬದಲು ಮುಖ್ಯಮಂತ್ರಿಯಾದಿಯಾಗಿ ಎಲ್ಲ ಸಚಿವರು ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಮುಳುಗಿದ್ದಾರೆ. ಜನಪರ ಕಾರ್ಯಕ್ರಮಗಳು ಕಾಣದ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಇರಬೇಕಿತ್ತು ಎಂಬುದು ಜನರ ಆಶಯವಾಗಿದೆ. ಬಿಜೆಪಿ ಸರ್ಕಾರ ರಚನೆ ಯಾವಾಗ ಎಂದು ಜನತೆ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಸರ್ಕಾರ ರಚನೆಗೆ ಕಾಲ ಕೂಡಿ ಬರಬೇಕಾಗಿದ್ದು, ಶೀಘ್ರದಲ್ಲಿಯೇ ಅದು ಬರಲಿದೆ. ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಹಾದಿ-ಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಹಲವು ಶಾಸಕರು ಸರ್ಕಾರದಿಂದ ಹೊರಬರಲು ತುದಿಗಾಲಲ್ಲಿ ನಿಂತಿದ್ದಾರೆ. ರಾಜ್ಯದಲ್ಲಿ ತುಘಲಕ್‌ ದರ್ಬಾರ್‌ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಚುನಾವಣೆ ಯಾವಾಗ ಬೇಕಾದರೂ ಬಂದರೂ ಎದುರಿಸಲು ಬಿಜೆಪಿ ಸಿದ್ಧವಿದೆ. ಬೆಂಗಳೂರಲ್ಲಿ 28 ಕ್ಷೇತ್ರಗಳ ಪೈಕಿ 22 ಸ್ಥಾನ ಗೆಲ್ಲಬೇಕು. ಸಂಸದರು ಸೇರಿದಂತೆ ಎಲ್ಲರೂ ಇದಕ್ಕೆ ಪಣತೊಡಬೇಕು. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದೆ. 28 ವಿಧಾನಸಭಾ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಿದರೆ ಮಾತ್ರ ದಿವಂಗತ ಅನಂತಕುಮಾರ ಆತ್ಮಕ್ಕೆ ಶಾಂತಿ ಸಿಗಲಿದೆ. ಈ ನಿಟ್ಟಿನಲ್ಲಿ ಮೂವರು ಸಂಸದರು ವಿಶೇಷ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

Follow Us:
Download App:
  • android
  • ios