ನವದೆಹಲಿ(ಜೂ.01): ಬಿಜೆಪಿಯೊಂದಿಗಿನ ಸೈದ್ಧಾಂತಿಕ ಹೋರಾಟ ನಿತ್ಯ ಮತ್ತು ನಿರಂತರ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಮಾತನಾಡಿದ ರಾಹುಲ್, ಚುನಾವಣೆ ಸೋಲು ಬಿಜೆಪಿ ವಿರುದ್ಧದ ಸೈದ್ಧಾಂತಿಕ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೇಶದ ಜಾತ್ಯಾತೀತ ಸ್ವರೂಪವನ್ನು ರಕ್ಷಿಸುವ ಹೊಣೆ ಕಾಂಗ್ರೆಸ್ ಮೇಲಿದ್ದು, ಯಾವುದೇ ಕಾರಣಕ್ಕೂ ಪಕ್ಷ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಅವರನ್ನು ಸಭೆ ಸರ್ವಾನುಮತದಿಂದ ಆರಿಸಿತು. ಸೋನಿಯಾ ಈ ಸ್ಥಾನಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಸೂಚಿಸಿದ್ದರು.

ಆದರೆ ಸುದೀರ್ಘ ಚರ್ಚೆಯ ಬಳಿಕ ಸೋನಿಯಾ ಗಾಂಧಿ ಅವರನ್ನೇ ಸಂಸದೀಯ ಪಕ್ಷದ ನಾಯಕಿಯಾಗಿ ಘೋಷಿಸಲಾಯಿತು. ಇನ್ನು ಚುನಾವಣೆಯಲ್ಲಿ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ನೀಡಿರುವ ರಾಜೀನಾಮೆ ಹಿಂಪಡೆಯುವಂತೆ ನಾಯಕರು ಮನವೋಲಿಸುವ ಕಸರತ್ತು ನಡೆಸಿದರು.