‘ಇದೇ ಸಿದ್ದರಾಮಯ್ಯ ಕೈಯ್ಯಲ್ಲಿ ಸಾಲಮನ್ನಾ ಮಾಡಿಸಿಯೇ ಸಿದ್ಧ. ಅವರು ಅದು ಹೇಗೆ ಮಾಡುವುದಿಲ್ಲವೋ ನಾನೂ ನೋಡುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಹಿರಂಗ ಸವಾಲು ಹಾಕಿದ್ದಾರೆ.
ಮೈಸೂರು (ಏ.06): ‘ಇದೇ ಸಿದ್ದರಾಮಯ್ಯ ಕೈಯ್ಯಲ್ಲಿ ಸಾಲಮನ್ನಾ ಮಾಡಿಸಿಯೇ ಸಿದ್ಧ. ಅವರು ಅದು ಹೇಗೆ ಮಾಡುವುದಿಲ್ಲವೋ ನಾನೂ ನೋಡುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಹಿರಂಗ ಸವಾಲು ಹಾಕಿದ್ದಾರೆ.
ನಂಜನಗೂಡಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಸಾಲಮನ್ನಾ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯದ್ದು ಮೂರ್ಖತನದ ಪರಮಾವಧಿ ಎಂದು ತರಾಟೆಗೆ ತೆಗೆದುಕೊಂಡರು.
ನಾವು ಅಧಿಕಾರಕ್ಕೆ ಬಂದ ಮೇಲೆ ಸಾಲಮನ್ನಾ ಮಾಡುವುದು ಬೇರೆ ವಿಷಯ. ಆದರೆ ಈ ಚುನಾವಣೆ ಮುಗಿದ ಬಳಿಕ ರಾಜ್ಯಾದ್ಯಂತ ಹೋರಾಟ ನಡೆಸಿ ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಅವರು ತಿಳಿಸಿದರು.
ಒಂದು ಉಪಚುನಾವಣೆಗಾಗಿ ರಾಜ್ಯದ ಮುಖ್ಯಮಂತ್ರಿ ಗಲ್ಲಿಗಲ್ಲಿ ಅಲೆಯುವಂತಾಗಿದೆ. ಸಚಿವರ ದಂಡೇ ಆಗಮಿಸಿದ್ದರೂ ಜನರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ. ಅವರ ತುಘಲಕ್ ದರ್ಬಾರ್, ಸೊಕ್ಕು ಮತ್ತು ದುರಂಹಕಾರಕ್ಕೆ ಜನ ತಕ್ಕ ಉತ್ತರ ನೀಡುತ್ತಾರೆ. ಈ ಚುನಾವಣೆಯಲ್ಲಿ ಕನಿಷ್ಠ ೨೦ ರಿಂದ ೨೫ ಸಾವಿರ ಮತಗಳ ಅಂತರದಿಂದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೂಂಡಾದಂಡು ಆಗಮನ:
ಸಿದ್ದರಾಮಯ್ಯ ಅವರು ಗುಂಪುಗಂಪಾಗಿ ಹೊರಗಿನ ಕಾರ್ಯಕರ್ತರು ಮತ್ತು ಗೂಂಡಾಗಳನ್ನು ಇಲ್ಲಿಗೆ ಕರೆತಂದು ಬಿಡುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿ, ಎಲ್ಲಾ ವಾಮಮಾರ್ಗಗಳನ್ನು ಬಳಸಿ ಚುನಾವಣೆ ಗೆಲ್ಲಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕರ್ತರು ಎಚ್ಚರಿಕೆಯಿಂದಿದ್ದು ಅಕ್ರಮಗಳು ಕಂಡುಬಂದರೆ ಚುನಾವಣಾ ಆಯೋಗಕ್ಕೆ ದೂರು ನೀಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ದೇವೇಗೌಡ ಮಾತು ನಿಜ:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದಲಿತರು ಕಾಂಗ್ರೆಸ್‌ನಿಂದ ವಿಮುಖರಾಗುತ್ತಿರುವುದಾಗಿ ಹೇಳಿರುವುದು ಸತ್ಯ. ಉತ್ತರ ಪ್ರದೇಶ ಚುನಾವಣೆಯಲ್ಲಿ ಸುಮಾರು ೮೫ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ೧೯೮೦ರಲ್ಲಿ ಅಟಲ್‌ಬಿಹಾರಿ ವಾಜಪೇಯಿ ಅವರು ಹೇಳಿದ ಮಾತು ಸತ್ಯವಾಗಿದೆ. ಕತ್ತಲು ಹೋಗಿ, ಬೆಳಕು ಬಂದು, ಕಮಲ ಅರಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದೇಶವ್ಯಾಪಿ ಹರಡಿದೆ. ಅಲ್ಲದೆ ಜಗತ್ತಿನ ನಾಯಕರ ಗಮನ ಸೆಳೆಯುವಂತೆ ಮಾಡಿದೆ ಎಂದು ಅವರು ಹೇಳಿದರು.
ಡಿಕೆಶಿಗೆ ತಿರುಗೇಟು
ಮುಂದಿನ ಚುನಾವಣೆ ಬಳಿಕ ಯಡಿಯೂರಪ್ಪ ಸ್ಥಾನ ಪ್ರತಿಪಕ್ಷ ನಾಯಕನಿಗೆ ಸೀಮಿತ ಮತ್ತು ಚುನಾವಣೆ ನಡೆಸುವುದು ಹೇಗೆ ಎಂದು ನಮಗೆ ಗೊತ್ತು ಎಂಬ ಸಚಿವ ಡಿ.ಕೆ.ಶಿವ
ಅವರ ಮಾತಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ‘ಅಯ್ಯೋ ಡಿ.ಕೆ.ಶಿವಕುಮಾರ್ ಅವರನ್ನು ಎದುರು ಹಾಕಿಕೊಂಡು ಬದುಕಲು ಸಾಧ್ಯವೇ? ಅವರು ಬಹಳ ಶಕ್ತಿವಂತ, ಶ್ರೀಮಂತ, ರಾಜಕೀಯವಾಗಿ ಪ್ರಭಾವಿ’ ಎಂದು ವ್ಯಂಗ್ಯವಾಡಿದರು.
