ಗುವಾಹಟಿ :  ಅಸ್ಸಾಂ ಟೀ ಉತ್ಪಾದಕರು ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿನ ಮನೋಹರಿ ಟೀ ಎಸ್ಟೇಟ್ ನಲ್ಲಿ ನಡೆದ ಟೀ ಹರಾಜು ಪ್ರಕ್ರಿಯೆಯಲ್ಲಿ  ಒಂದು ಕೆ.ಜಿ ಟೀ ಬರೋಬ್ಬರಿ 39 ಸಾವಿರ ರು.ಗಳಿಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. 

ಇದುವರೆಗೂ ಟೀ ಹರಾಜಿನಲ್ಲಿ ಗಳಿಸಿದ ಅತ್ಯಧಿಕ ಪ್ರಮಾಣದ ಬೆಲೆಯು ಇದಾಗಿದೆ ಎಂದು ಇಲ್ಲಿನ ಟೀ ಉತ್ಪಾದಕರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಗುವಾಹಟಿಯ ಟೀ ಬೈಯರ್ಸ್ ಆಕ್ಷನ್ ಅಸೋಸಿಯೇಷನ್ ಕಾರ್ಯದರ್ಶಿ ದಿನೇಶ್ ಬಿಹಾನಿ ಅವರು ಇದೊಂದು ಹೆಮ್ಮೆಯ ಸಮಯವಾಗಿದೆ.  

ನಮ್ಮ ಕೇಂದ್ರವು ಉತ್ತಮ ದರ್ಜೆಯ ವಿವಿಧ ರೀತಿಯ ಟೀಗಳನ್ನು ಗುರುತಿಸಿ  ಉತ್ತಮ ಗುಣಮಟ್ಟದಲ್ಲಿ ಟೀ ಬೆಳೆಯಲು ಪ್ರೋತ್ಸಾಹ ನೀಡುತ್ತದೆ.  ವಿಶೇಷ ಟೀ ಗಳಿಗೆ ನಮ್ಮ ಕೇಂದ್ರದಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಹೇಳಿದ್ದಾರೆ. 

ಇನ್ನು ಇಂದು ಹರಾಜಾದ ಈ ಟೀಯನ್ನು ಮನೋಹರಿ ಟೀ ಎಸ್ಟೇಟ್ ಮಾಲಿಕರಾದ ರಾಜನ್ ಲೋಹಿಯಾ ಅವರ ನೇತೃತ್ವದಲ್ಲಿ ಸಿಕೆ ಪರಾಶರ ಅವರು ತಯಾರು ಮಾಡಿದ್ದರು.