Asianet Suvarna News Asianet Suvarna News

ಸುವರ್ಣ ಚಾನಲ್ ಮೇಲೆ ಕೋಬ್ರಾ ಪೋಸ್ಟ್ ಆರೋಪ - ನಮ್ಮ ಸ್ಪಷ್ಟೀಕರಣ

'ಕೋಬ್ರಾ ಪೋಸ್ಟ್ ಎಂಬ ಹೆಸರಿನ ವೆಬ್​ಸೈಟ್​ನಲ್ಲಿ ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯೊಂದನ್ನು ಮಾಡಿದ್ದೇವೆ', ಅದರಲ್ಲಿ ಸುವರ್ಣ ನ್ಯೂಸ್-ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ರವಿ ಹೆಗಡೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬ ಅರ್ಥದ ವರದಿಯೊಂದು ಪ್ರಕಟವಾಗಿದೆ. ಈ ವಿಷಯದಲ್ಲಿ ಸಂಸ್ಥೆ ಕೆಲವು ಸ್ಪಷ್ಠೀಕರಣ ನೀಡಿದೆ...
    

Asianet Kannada digital denounce baseless charges against Suvarna News

ಪ್ರೀತಿಯ ಸುವರ್ಣ ನ್ಯೂಸ್ ವೀಕ್ಷಕರೆ ಮತ್ತು ಕನ್ನಡ ಪ್ರಭ ಓದುಗರೇ... 

ಕೋಬ್ರಾ ಪೋಸ್ಟ್ ಎಂಬ ಹೆಸರಿನ ವೆಬ್​ಸೈಟ್​ನಲ್ಲಿ ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯೊಂದನ್ನು ಮಾಡಿದ್ದೇವೆ, ಅದರಲ್ಲಿ ಸುವರ್ಣ ನ್ಯೂಸ್-ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ರವಿ ಹೆಗಡೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬ ಅರ್ಥದ ವರದಿಯೊಂದು ಪ್ರಕಟವಾಗಿದೆ. ಈ ವಿಷಯದಲ್ಲಿ ಸಂಸ್ಥೆಗೆ ಕೆಲವು ಸ್ಪಷ್ಠೀಕರಣಗಳನ್ನು ಕೊಡುವುದಕ್ಕಿದೆ...    

ಇದೆಲ್ಲಾ ನಡೆದದ್ದು ಕಳೆದ ವರ್ಷ ಅಕ್ಟೋಬರ್ 11ರಂದು. ಸಂಜೆ ಸುಮಾರು 5 ಗಂಟೆಗೆ ತನ್ನನ್ನು ತಾನು ಆಚಾರ್ಯ ಛತ್ರಪಾಲ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ನಮ್ಮ ಕಚೇರಿಗೆ ಬಂದಿದ್ದು ನಿಜ. ಆತ ಭಗವದ್ಗೀತೆ ಮತ್ತು ಕೃಷ್ಣಭಕ್ತಿಯ 15 ನಿಮಿಷದ ಜಾಹೀರಾತು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಬಗ್ಗೆ ಪ್ರಸ್ತಾಪವನ್ನಿಟ್ಟ. ಈ ಕಾರ್ಯಕ್ರಮದಲ್ಲಿ ಯಾವುದೇ ವಿವಾದದ ಅಂಶಗಳಿರುವುದಿಲ್ಲ. ಉತ್ತರ ಪ್ರದೇಶದ ಖ್ಯಾತ ಸ್ವಾಮೀಜಿಯೊಬ್ಬರಿಂದ ಉಪನ್ಯಾಸವಿರುತ್ತದೆ. ಎಲ್ಲೂ ಲಕ್ಷ್ಮಣ ರೇಖೆಯನ್ನು ದಾಟುವುದಿಲ್ಲ. ಇದನ್ನು ಜಾಹೀರಾತಾಗಿ ಪ್ರಸಾರ ಮಾಡುವಂತೆ ಅತ ಕೇಳಿಕೊಂಡ. ಹಾಗೂ ತಾವು ಭಗವದ್ಗೀತೆ ಕುರಿತು ಬೆಂಗಳೂರಿನಲ್ಲಿ ಆನ್ ಗ್ರೌಂಡ್ ಕಾರ್ಯಕ್ರಮ ಮಾಡುತ್ತೇವೆ ಅದಕ್ಕೆ ತಮ್ಮ ಸುದ್ದಿ ಪ್ರಕಟಣೆಯ ನೆರವು ಬೇಕು ಎಂದು ಕೇಳಿದ್ದಾನೆ. ನಾವು ಬೆಳಗಿನ ಸಮಯದಲ್ಲಿ ಆ ರೀತಿಯ ಜಾಹೀರಾತು ಕಾರ್ಯಕ್ರಮಗಳನ್ನು ಈಗಾಗಲೇ ಪ್ರಸಾರ ಮಾಡುತ್ತಿದ್ದೇವೆ. ಹಾಗೂ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಅದಕ್ಕೆ ಎಲ್ಲ ಪತ್ರಿಕೆ ಮತ್ತು ವಾಹಿನಿಗಳು ಸುದ್ದಿ ಪ್ರಸಾರ ಮಾಡುವಂತೆ ನಾವೂ ಮಾಡಿದ್ದೇವೆ. ಈ ವಿಚಾರನ್ನು ಮಾತನಾಡುತ್ತಿರುವಾಗಲೇ, ಕನ್ನಡಪ್ರಭ ಪ್ರಧಾನ ಸಂಪಾದಕರು ಹೇಳಿದ್ದು ನಾವು ಇಂತಹ ಸುದ್ದಿ ಪ್ರಸಾರವನ್ನು ಈಗಾಗಲೇ ಮಾಡುತ್ತಿದ್ದೇವೆ. ಪರವಾಗಿಲ್ಲ ನಿಮಗೂ ಪ್ರಚಾರದ ನೆರವು ನೀಡೋಣ ಎಂದು. ಆದರೆ, ಈಗ ಕೋಬ್ರಾಪೋಸ್ಟ್ ಈ ಸಂಭಾಷಣೆಯ ಆಯ್ದ ಭಾಗವನ್ನು ಕತ್ತರಿಸಿ-ಜೋಡಿಸಿ ಅಪಾರ್ಥ ಬರುವಂತೆ ಮಾಡಿದೆ. ಅಲ್ಲದೇ, ಆತ ತಾನು ಬಂದಿದ್ದು ಭಗವದ್ಗೀತೆ ಕುರಿತ ಜಾಹೀರಾತು ನೀಡಲು ಹಾಗೂ ಆನ್ ಗ್ರೌಂಡ್ ಕಾರ್ಯಕ್ರಮದ ಕುರಿತು ಸುದ್ದಿ ಪ್ರಕಟಣೆ ಕುರಿತು ಎಂಬ ವಿಚಾರವನ್ನು ಇಡೀ ವಿಡಿಯೋದಲ್ಲಿ ಎಲ್ಲೂ ತೋರಿಸಿಲ್ಲ. ಹೀಗೆ ಅಸಲಿ ಚರ್ಚೆಯ ವಿಷಯವನ್ನೇ ಮುಚ್ಚಿಡುವ ಉದ್ದೇಶ ಕೋಬ್ರೋಪೋಸ್ಟ್‌ಗೆ ಏನಿದೆ?
    

Asianet Kannada digital denounce baseless charges against Suvarna News

ಇಷ್ಟೇ ಅಲ್ಲ. ನಾವು ಸಂಪಾದಕೀಯದ ಒಂದು ಚೌಕಟ್ಟಿನ ಒಳಗೆ ಏನೇನು ಸುದ್ದಿ ಪ್ರಕಟಿಸಬಹುದೋ ಅದನ್ನು ಮಾತ್ರ ಮಾಡಲು ಸಾಧ್ಯ. ಉಳಿದದ್ದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಜಾಹೀರಾತು ಹಿರಿಯ ಅಧಿಕಾರಿಯೂ ಏನೇನು ಸಾಧ್ಯವೋ ಆ ಸಂಪಾದಕೀಯ ನೆರವನ್ನು ಮಾತ್ರ ಕೊಡಲು ಸಾಧ್ಯ ಎಂದು ಹೇಳಿದ್ದು ಕೋಬ್ರೋ ಪೋಸ್ಟ್ ವಿಡಿಯೋದಲ್ಲೇ ಇದೆ. ಆದರೆ, ಇದನ್ನು ಬೇಕೆಂದೇ ಕೋಬ್ರಾಪೋಸ್ಟ್ ಪರಿಗಣಿಸಿಲ್ಲ. ಹಿಂದುತ್ವ ಕುರಿತು ಆತ ಹೆಚ್ಚು ಹೆಚ್ಚು ವರದಿಗಳನ್ನು ಮಾಡುವಂತೆ ನಮ್ಮನ್ನು ಒತ್ತಾಯಿಸಿದಾಗ, ನಾವು ಈಗಾಗಲೇ ಮಾಡುವ ವರದಿಗಳಿಂದಲೇ ನಮಗೆ ಹಿಂದೂ ಪರ ಹಾಗೂ ಬಿಜೆಪಿ ಪರ ವಾಹಿನಿ ಎಂಬ ಹಣೆಪಟ್ಟಿ ಬಂದಿದೆ. ಕೆಲವು ಬಾರಿ, ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ನಮ್ಮ ವಾಹಿನಿಯ ಚರ್ಚೆಯಲ್ಲಿ ಪಾಲ್ಗೊಳ್ಳಲು ಇಲ್ಲ ಎಂದಿದ್ದಿದೆ. ಅದಕ್ಕಾಗಿ, ನಾವು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ರವಿ ಹೆಗಡೆಯವರು ಹೇಳಿರುವ ಮಾತನ್ನು ಕೋಬ್ರಾಪೋಸ್ಟ್ ವಿಡಿಯೋದಲ್ಲಿ ತಿರುಚಿದೆ. We don't do it. ಎಂದಿದ್ದನ್ನು We couldn't do it ಎಂದು ಲಿಪ್ಯಂತರ ಮಾಡಿದೆ. ಇದೂ ಕೋಬ್ರಾ ಪೋಸ್ಟ್ ವಿಡಿಯೋದಲ್ಲೇ ಇದೆ.  ಇದು ಅವರ ದುರುದ್ದೇಶವಲ್ಲದೇ ಇನ್ನೇನೂ ಅಲ್ಲ.
    

Asianet Kannada digital denounce baseless charges against Suvarna News

ಇನ್ನು ಬಿಜೆಪಿ ನಾಯಕರ ಬೀದಿ ಜಗಳದ ಕುರಿತು ರವಿ ಹೆಗಡೆಯವರು ವಿಶ್ಲೇಷಣೆ ಮಾಡಿದ್ದು ಆಚಾರ್ಯ ಛತ್ರಪಾಲನ ಕೋರಿಕೆಯ ಮೇರೆಗೆ. ಕರ್ನಾಟಕದ ರಾಜಕೀಯ ಸ್ಥಿತಿ ಹೇಗೆದೆ ಎಂದು ಕೇಳಿದಾಗ ರವಿ ಹೆಗಡೆಯವರು ಬಿಜೆಪಿ ನಾಯಕರ ಬೀದಿ ಜಗಳದಿಂದಾಗಿ ಬಿಜೆಪಿಯ ಬಗ್ಗೆ ಕೆಟ್ಟ ಜನಾಭಿಪ್ರಾಯ ರೂಪುಗೊಂಡಿದೆ ಎಂದು ಹೇಳಿದ್ದಾರೆ. ಇದು ಮಹಾ ರಹಸ್ಯವೇನೂ ಅಲ್ಲ. ಇದನ್ನು ಎಲ್ಲ ಮಾಧ್ಯಮಗಳೂ ವರದಿ ಮಾಡಿದ್ದು ಏನು ನಿಗೂಢ ರಹಸ್ಯವೇ? ಇದನ್ನು ರವಿ ಹೆಗಡೆಯವರು ಸುವರ್ಣ ನ್ಯೂಸ್ ನೇರ ಚರ್ಚಾ ಕಾರ್ಯಕ್ರಮಗಳಲ್ಲೇ ಹೇಳಿದ್ದಾರೆ. ಇಂತಹ ನಿಷ್ಠುರ ವಿಶ್ಲೇಷಣೆಯನ್ನು ಅವರು ಎಲ್ಲ ಪಕ್ಷಗಳು ಹಾಗೂ ಮುಖಂಡರ ಬಗ್ಗೆ ಮಾಡಿದ್ದಾರೆ. ಕೋಬ್ರಾಪೋಸ್ಟ್ ತನಗೆ ಬೇಕಾದ ಅಂಶವನ್ನು ತನಗೆ ಬೇಕಾದಂತೆ ವರದಿ ಮಾಡಿದೆ ಅಷ್ಟೇ.  ಅಮಿತ್ ಶಾ ಅವರು ಅಕ್ಟೋಬರ್ ನಲ್ಲಿ ಸಂದರ್ಶನ ನೀಡಿದ್ದು ಕನ್ನಡಪ್ರಭದಲ್ಲಿ ಮಾತ್ರ ಪ್ರಕಟವಾದರೂ ನಂತರ ಅವರು ರಾಜ್ಯದ ಅನೇಕ ವಾಹಿನಿಗಳು ಹಾಗೂ ಪತ್ರಿಕೆಗಳಿಗೆ ಸಂದರ್ಶನ ನೀಡಿದ್ದನ್ನು ಕೋಬ್ರಾಪೋಸ್ಟ್ ಮುಚ್ಚಿಟ್ಟಿದೆ.

ಎಲ್ಲರೂ ಗಮನಿಸಬೇಕಾದ ಒಂದು ಪ್ರಮುಖ ಅಂಶ ಇಲ್ಲಿದೆ ನೋಡಿ.


 ನಮಗೆ ಜಾಹೀರಾತು ನೀಡಲು ಬಂದ ವ್ಯಕ್ತಿ ಭಗವದ್ಗೀತೆ ಮತ್ತು ಕೃಷ್ಣ ಸಂದೇಶದ ಜಾಹೀರಾತು, AFP ಹಾಗೂ ಕಮರ್ಷಿಯಲ್ ಟೈಮ್ ಸ್ಲಾಟ್​ ಖರೀದಿಸುವ ಬಗ್ಗೆಯೇ ಮಾತು ಆರಂಭಿಸಿದ್ದ. ಅದಕ್ಕೆ ನಮ್ಮ ಸಂಸ್ಥೆಯ ಸಿಬ್ಬಂದಿ ಹಾಗೂ ಪ್ರಧಾನ ಸಂಪಾದಕರು ಸಮ್ಮತಿ ಸೂಚಿಸುತ್ತಿದ್ದಂತೇ, ಆತ ತನ್ನ ವರಸೆಯನ್ನು ಬದಲಾಯಿಸಿ, ಮುಂಬರುವ ದಿನಗಳಲ್ಲಿ ನಿಮ್ಮ ಚಾನಲ್​ನಲ್ಲಿ ಹಿಂದುತ್ವದ ಪರವಾಗಿ- ರಾಜ್ಯ ಸರ್ಕಾರ ಮತ್ತು ಜೆಡಿಎಸ್​ ವಿರುದ್ಧ ವರದಿ ಪ್ರಸಾರ ಮಾಡಿದರೆ ದೊಡ್ಡ ಮೊತ್ತದ ಜಾಹೀರಾತು ನೀಡುವುದಾಗಿ ಆಮಿಷ ಒಡ್ಡಿದ. ನಂತರ ಹಿಂದುತ್ವ, ಚುನಾವಣೆ, ಸಂಘಟನೆ ಎಂದು ಪದೇ ಪದೇ ಹಲುಬಲು ಶುರು ಮಾಡಿದ ಆತ. ಈ ಹಂತದಿಂದ ರವಿ ಹೆಗಡೆಯವರಿಗೆ ಈತನ ಉದ್ದೇಶದ ಬಗ್ಗೆ ಶಂಕೆ ಮೂಡಿರುತ್ತದೆ. ಆಗ ಆತನ ಹಿನ್ನೆಲೆ ಮತ್ತು ಉದ್ದೇಶವನ್ನು ಕೆದಕಲು ಆರಂಭಿಸುತ್ತಾರೆ. ಆಗ, ಈತನಿಗೆ ಚುನಾವಣೆಯ ಸಮಯದಲ್ಲಿ ಕರ್ನಾಟಕದ ಕೋಮು ಸೌಹಾರ್ದತೆ ಹಾಳುಗೆಡವುವ ಉದ್ದೇಶ ಇದೆ ಎಂಬ ಸಂಶಯ ದಟ್ಟವಾಗುತ್ತದೆ. ಈ ತಕ್ಷಣ ಒಂದು ರಹಸ್ಯ ಕ್ಯಾಮೆರಾ ಕಾರ್ಯಾಚರಣೆ ಮಾಡುವ ನಿರ್ಧಾರಕ್ಕೆ ರವಿ ಹೆಗಡೆಯವರು ಬರುತ್ತಾರೆ. ಕೆಲವೇ ಕ್ಷಣಗಳಲ್ಲಿ, ಆ ಬಗ್ಗೆ ನಮ್ಮ ವಿಶೇಷ ತನಿಖಾ ತಂಡದ ಅನುಭವಿ ಪತ್ರಕರ್ತರಾದ ಅಜಿತ್ ಹನುಮಕ್ಕನವರ್ ಮತ್ತು ವಿಜಯಲಕ್ಷ್ಮೀ ಶಿಬರೂರು ಅವರಿಗೆ ಪ್ರಧಾನ ಸಂಪಾದಕರಾದ ರವಿ ಹೆಗಡೆಯವರು ಸೂಚನೆ ನೀಡಿರುತ್ತಾರೆ. ಮತ್ತು ಸಂಸ್ಥೆಯ ನೀತಿಗನುಸಾರ ಇದಕ್ಕೆ ದದಾಖಲೆಯಾಗಿ ಈಮೇಲ್ ಆದೇಶವನ್ನೂ ನೀಡುತ್ತಾರೆ. ಆದರೆ, ಈ ಚಟುವಟಿಕೆಗಳನ್ನು ಗಮನಿಸಿದ ಆಚಾರ್ಯ ಛತ್ರಪಾಲ್ ತಡಬಡಾಯಿಸಿ ನಮ್ಮ ಕಚೇರಿಯಿಂದ ಹೊರಗೆ ಹೋಗುತ್ತಾನೆ. 

ಈ ಈಮೇಲ್ ದಾಖಲೆಯ ಸ್ಕ್ರೀನ್​ ಶಾಟ್​ ನೀಡಲಾಗಿದ್ದು, ಅದರಲ್ಲಿರುವ ದಿನಾಂಕ ಮತ್ತು ಸಮಯವನ್ನು ಗಮನಿಸಬಹುದು. It was an instant action.ಹೊರಗೆ ಹೋಗುವ ಆ ವ್ಯಕ್ತಿಯನ್ನು ಮತ್ತಷ್ಟು ಮಾತಿಗೆ ಎಳೆಯಲು ಯತ್ನಿಸಿದಾಗ, ಇದೀಗ ವಾಪಸ್ ಬರುತ್ತೇನೆ, ಪಕ್ಕದಲ್ಲೇ ಇರುವ ಇನ್ನೊಂದು ಟಿ.ವಿ. ಕಚೇರಿಯಲ್ಲಿ ಮೀಟಿಂಗ್ ಮುಗಿಸಿ ವಾಪಸ್​ ಬರುವುದಾಗಿ ಆಚಾರ್ಯ ಛತ್ರಪಾಲ್​ ಹೇಳಿದ್ದರಿಂದ ರಹಸ್ಯ ಕ್ಯಾಮೆರಾ ಸಲಕರಣೆಗಳೊಂದಿಗೆ ನಮ್ಮ ತಂಡ ಸಿದ್ಧವಾಗಿತ್ತು. ಆದರೆ, ಸದರಿ ವ್ಯಕ್ತಿ ಬರಲಿಲ್ಲ. ವಿಚಾರ ತುಸು ಸೆನ್ಸಿಟಿವ್ ಆಗಿರುವುದರಿಂದ ನಾವು ಸುವರ್ಣ ನ್ಯೂಸ್-ಕನ್ನಡ ಪ್ರಭ ಸಂಸ್ಥೆಗಳ ಪರವಾಗಿ ಮರುದಿನ ಬೆಳಿಗ್ಗೆಯೇ, ಅಂದರೆ, ಅಕ್ಟೋಬರ್ 12 ನೇ ತಾರೀಕು, 2017 ರ ಮುಂಜಾನೆಯೇ ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್​ ಠಾಣೆಯಲ್ಲಿ ಆಚಾರ್ಯ ಛತ್ರಪಾಲ್ ಎಂದು ಹೇಳಿಕೊಂಡು ಬಂದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದೇವೆ. ಈ ವ್ಯಕ್ತಿಗೆ ಕೋಮು ಸೌಹಾರ್ದತೆ ಕದಡುವ ಉದ್ದೇಶವಿದೆಯಾದ್ದರಿಂದ ನಾವು ಕುಟುಕು ಕಾರ್ಯಾಚರಣೆ ನಡೆಸುತ್ತೇವೆ. ಅಗತ್ಯ ಬಿದ್ದಲ್ಲಿ ಈತನ್ನು ವಶಕ್ಕೆ ಪಡೆದು ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದೇವೆ. ದೂರಿನ ಪ್ರತಿ ಮತ್ತು ಪೊಲೀಸ್​ ಠಾಣೆಯ ಸ್ವೀಕೃತಿ ಪತ್ರಗಳು ಇಲ್ಲಿವೆ.

ಈ ದೂರಿನ ನಂತರ ನಮ್ಮ ದೂರವಾಣಿ ಕರೆಗೆ ಉತ್ತರಿಸಿದ ಆ ವ್ಯಕ್ತಿ 11 ಗಂಟೆಗೆ ಕಚೇರಿಗೆ ಬರುತ್ತೇನೆ ಎಂದ. ನಂತರ 12 ಗಂಟೆಗೆ ಬರುತ್ತೇನೆ ಎಂದ. ಬಳಿಕ ಮಧ್ಯಾಹ್ನ 2.30ಕ್ಕೆ ಬರುತ್ತೇನೆ ಎಂದ. ಆದರೆ, ಸಂಜೆಯಾದರೂ ಬರದಿದ್ದಾಗ, ಈತ ನಮ್ಮ ಬಲೆಯಿಂದ ತಪ್ಪಿಸಿಕೊಂಡಿರುವುದು ನಮ್ಮ ಅರಿವಿಗೆ ಬಂತು. ಕೂಡಲೇ ನಾವು ಈತ ನಮ್ಮ ಕಚೇರಿಗೆ ಬಂದ ವಿಷಯ, ಉದ್ದೇಶ, ಆಮಿಷ ಹಾಗೂ ನಮ್ಮ ಕ್ರಮದ ಕುರಿತು ಮಾರನೇ ದಿನದ ಕನ್ನಡಪ್ರಭ ಸಂಚಿಕೆಯಲ್ಲೇ ಸುದ್ದಿ ಪ್ರಕಟಿಸಿದೆ. 'ಉತ್ತರ ಪ್ರದೇಶ ಮಾದರಿ ಬಿಜೆಪಿ ಚುನಾವಣಾ ತಂತ್ರಗಾರಿಕೆ?' ಎಂಬ ತೆಲೆಬರಹದ ವರದಿಯಲ್ಲಿ ಬಹಳ ಸ್ಪಷ್ಟವಾಗಿ ಆತ, ವಿರೋಧ ಪಕ್ಷಗಳ ಕುರಿತು ನಕಾರಾತ್ಮಕ ವರದಿ ಪ್ರಕಟಿಸಿದರೆ ಸಾಕಷ್ಟು ಜಾಹೀರಾತು ನೀಡುವ ಆಮಿಷ ಒಡ್ಡಿದ್ದಾನೆ ಎಂಬ ಅಂಶವನ್ನು ಪ್ರಕಟಿಸಲಾಗಿದೆ. ಹೀಗಿರುವಾಗ ಜಾಹೀರಾತು ಆಮಿಷಕ್ಕೆ ಬಲಿಯಾಗಿ ಸುವರ್ಣ ನ್ಯೂಸ್  - ಕನ್ನಡ ಪ್ರಭಗಳು ನಕಾರಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡಲು ಒಪ್ಪಿಕೊಂಡವು ಎಂಬ ನಿರ್ಧಾರಕ್ಕೆ ಬರಲು ಹೇಗೆ ಸಾಧ್ಯ..? ಒಬ್ಬ ವ್ಯಕ್ತಿ ಹಣದ ಆಮಿಷ ಒಡ್ಡಿ ಕೋಮು ಸೌಹಾರ್ದತೆ ಹಾಳು ಮಾಡುವಂಥ ವರದಿ ಪ್ರಕಟಿಸುವಂತೆ ಒಂದು ಮಾಧ್ಯಮ ಸಂಸ್ಥೆಯ ಎದುರು ಪ್ರಸ್ತಾಪ ಇಟ್ಟಾಗ ಆ ಜವಾಬ್ದಾರಿಯುತ ಸಂಸ್ಥೆ ಏನು ಮಾಡಬಹುದು..? ಸಾಧ್ಯವಿಲ್ಲ ಎಂದು ಸುಮ್ಮನಾಗಬಹುದು. ಇಲ್ಲವೇ, ಆತನ ವಿರುದ್ಧ ಒಂದು ರಹಸ್ಯ ಕ್ಯಾಮರಾ ಕಾರ್ಯಾಚರಣೆ ನಡೆಸಿ ಆತನ ಇಡೀ ಅಜೆಂಡಾವನ್ನು ಬಯಲು ಮಾಡುವುದು. ಅದು ಸಾಧ್ಯವಾಗದಿದ್ದಾಗ ಆತನ ವಿರುದ್ಧ ಪಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ - ವರದಿ ಪ್ರಕಟಿಸುವುದು. ನಾವು ಮಾಡಿದ್ದೂ ಅದನ್ನೇ. ಅದೂ ಆಚಾರ್ಯ ಛತ್ರಪಾಲ್​ ಎಂಬ ವ್ಯಕ್ತಿ ಒಬ್ಬ ಪತ್ರಕರ್ತ ಎಂಬ ಮಾಹಿತಿಯೇ ಇಲ್ಲದೇ ಇದೆಲ್ಲವನ್ನೂ ನಮ್ಮ ಸಂಸ್ಥೆ ಮಾಡಿದೆ. ಆತ ಮಾಡಿದ್ದು ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ಎಂದು ಗೊತ್ತಾಗಿದ್ದೇ ಇತ್ತೀಚೆಗೆ. ಒಂದು ಜವಾಬ್ದಾರಿಯುತ ಮಾಧ್ಯಮ ಸಂಸ್ಥೆಯಿಂದ ಇನ್ನೇನು ನಿರೀಕ್ಷಿಸುತ್ತೀರಿ..?

ಆಚಾರ್ಯ ಛತ್ರಪಾಲ್​ ಎಂಬ ವ್ಯಕ್ತಿ ಜಾಹೀರಾತಿನ ಒಂದು ಪ್ರಪೋಸಲ್ ಕೊಡಲು ನಮ್ಮ ಜಾಹೀರಾತು ವಿಭಾಗವನ್ನು ಪದೇ ಪದೇ ಒತ್ತಾಯಿಸುತ್ತಾನೆ. ಅವನ ದುರುದ್ದೇಶ ಗೊತ್ತಾಗುತ್ತಲೇ ನಮ್ಮ ಕನ್ನಡ ಪ್ರಭವಾಗಲೀ, ಸುವರ್ಣ ನ್ಯೂಸ್ ಆಗಲೀ ಆತನಿಗೆ ಯಾವುದೇ ಪ್ರಸ್ತಾಪವನ್ನಾಗಲೀ ಕೊಡುವುದೂ ಇಲ್ಲ.. ಕಳಿಸುವುದೂ ಇಲ್ಲ. ಆದರೆ ಅವನನ್ನು ಕುಟುಕು ಕಾರ್ಯಾಚರಣೆಗೆ ಬೀಳಿಸಿ ಪೊಲೀಸರ ವಶಕ್ಕೆ ನೀಡುವುದಕ್ಕೆ ನಮ್ಮ ಕಾರ್ಯಾಚರಣೆ ಮುಂದುವರಿದಿತ್ತು. 
    

Asianet Kannada digital denounce baseless charges against Suvarna News
ಈಗಾಗಲೇ ನಾವು ಕೋಬ್ರಾ ಪೋಸ್ಟ್​ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದೇವೆ. ಹತ್ತು ವರ್ಷಗಳಿಂದ ಸುವರ್ಣ ನ್ಯೂಸ್ ಮತ್ತು 50 ವರ್ಷಗಳಿಂದ ಕನ್ನಡ ಪ್ರಭ ಪತ್ರಿಕೆ ಕನ್ನಡಿಗರ ಪರವಾಗಿ, ಭ್ರಷ್ಟರ ವಿರುದ್ಧವಾಗಿ, ಕೋಮು ದ್ವೇಷ ಬಿತ್ತುವವರ ವಿರುದ್ಧ ನೇರ, ದಿಟ್ಟ, ನಿರಂತರವಾಗಿ ನಡೆಸುತ್ತಿರುವ ಹೋರಾಟವನ್ನು ಮುಂದುವರಿಸುತ್ತದೆ. ನಮ್ಮ ಸಂಸ್ಥೆಯ ಮತ್ತು ಪ್ರಧಾನ ಸಂಪಾದಕರ ಹೆಸರು ಹಾಳುಗೆಡುವಲು ಯತ್ನಿಸಿದವರಿಗೆ ಕಾನೂನು ಪ್ರಕಾರ ಪಾಠ ಕಲಿಸಲಾಗುವುದು. ಕೋಬ್ರಾಪೋಸ್ಟಿನ ದುರುದ್ದೇಶದ, ವರದಿಗೆ ಬೆಂಗಳೂರಿನ ನ್ಯಾಯಾಲಯ ಈಗಾಗಲೇ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ನಮ್ಮ ಕಾನೂನು ಸಮರ ದಡಮುಟ್ಟುವವರೆಗೂ ಮುಂದುವೆರೆಯಲಿದೆ. ನೇರ... ದಿಟ್ಟ. ನಿರಂತರ.

Follow Us:
Download App:
  • android
  • ios