ಬೆಂಗಳೂರು :  ನಿಗದಿತ ದರಕ್ಕಿಂತ ಅಧಿಕ ಬಾಡಿಗೆ ಕೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಆಟೋ ಚಾಲಕನೊಬ್ಬನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಾಜಿನಗರದ ಮುಜಾಹೀದ್‌ ಬಂಧಿತನಾಗಿದ್ದು, ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರಾತ್ರಿ ಎಎಸ್‌ಐ ಕರಿಯಣ್ಣ ಜತೆ ಚಾಲಕ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಎಎಸ್‌ಐ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆಟೋ ನೋಂದಣಿ ಸಂಖ್ಯೆ ಆಧರಿಸಿ ಗುರುವಾರ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ನಗರ ಅಪರಾಧ ದಾಖಲಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಕರಿಯಣ್ಣ ಅವರು, ಲೋಕಸಭಾ ಚುನಾವಣೆ ಪೂರ್ವ ಸಿದ್ಧತೆ ಕುರಿತು ಆಯುಕ್ತರ ಕಚೇರಿಯಲ್ಲಿ ಬುಧವಾರ ಸಂಜೆ ನಡೆದ ಸಭೆ ಮುಗಿಸಿ ಲಿಂಗರಾಜಪುರದಲ್ಲಿರುವ ಮಗನ ಮನೆಗೆ ಹೊರಟ್ಟಿದ್ದರು.

ಮುಜಾಹೀದ್‌ ಆಟೋ ಹತ್ತಿದ ಎಎಸ್‌ಐ, ಲಿಂಗರಾಜಪುರಕ್ಕೆ ಬರುವಂತೆ ಕೇಳಿದ್ದಾರೆ. ಆಗ ಚಾಲಕ .200 ಬಾಡಿಗೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ಆಕ್ಷೇಪಿಸಿದ ಕರಿಯಣ್ಣ ಅವರು, ಸಾಮಾನ್ಯವಾಗಿ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದಿಂದ ಲಿಂಗರಾಜಪುರಕ್ಕೆ .60 ಪ್ರಯಾಣ ದರವಿದೆ. ನಾನು ಅದಕ್ಕಿಂತ .10 ಹೆಚ್ಚಿಗೆ ಕೊಡುತ್ತೇನೆ ಎಂದಿದ್ದಾರೆ. ಆಗ ಬಾಡಿಗೆ ಬರಲು ನಿರಾಕರಿಸಿದ ಚಾಲಕ, ಎಎಸ್‌ಐ ಜತೆ ಉದ್ಧಟತನ ತೋರಿಸಿದ್ದಾನೆ. ಆಗ ಆಟೋ ನೋಂದಣಿ ಮತ್ತು ಚಾಲಕ ಹೆಸರನ್ನು ಬರೆದುಕೊಳ್ಳಲು ಎಎಸ್‌ಐ ಮುಂದಾಗಿದ್ದಾರೆ. ಈ ವೇಳೆ ಸಿಟ್ಟಿಗೆದ್ದು ಎಎಸ್‌ಐ ಅವರಿಗೆ ಎದೆ ಮತ್ತು ಮುಖಕ್ಕೆ ಬಲವಾಗಿ ಚಾಲಕ ಗುದ್ದಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಆಟೋ ಚಾಲಕ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.