ಪಣಜಿ(ಫೆ.18): ಅಂಡಮಾನ್- ನಿಕೋಬಾರ್ ದ್ವೀಪ ಸಮೂಹದಲ್ಲಿರುವ ದೇಶದ ಏಕೈಕ ಸಜೀವ ಜ್ವಾಲಾಮುಖಿಯಲ್ಲಿ ಮತ್ತೆ ಚಟುವಟಿಕೆಗಳು ಕಂಡುಬಂದಿದ್ದು, ಬೂದಿ ಮತ್ತು ಲಾವಾರಸ ಹೊರಬರಲು ಆರಂಭವಾಗಿದೆ.

ಅಂಡಮಾನ್- ನಿಕೋಬಾರ್‌'ನ ರಾಜಧಾನಿ ಪೋರ್ಟ್‌ಬ್ಲೇರ್‌'ನಿಂದ ಈಶಾನ್ಯ ದಿಕ್ಕಿಗೆ 140 ಕಿ.ಮೀ. ದೂರದಲ್ಲಿ ಬಾರನ್ ಐಲ್ಯಾಂಡ್ ಜ್ವಾಲಾಮುಖಿ ಇದೆ. ಅದು 150 ವರ್ಷಗಳ ಕಾಲ ನಿಷ್ಕ್ರಿಯವಾಗಿತ್ತು. 1991ರಲ್ಲಿ ಹೊಗೆ, ಲಾವಾರಸ ಉಗುಳಿತ್ತು.

ಇದೀಗ ಮತ್ತೆ ಬೂದಿ ಮತ್ತು ಲಾವಾರಸವನ್ನು ಉಗುಳಲು ಆರಂಭಿಸಿದೆ ಎಂದು ಗೋವಾ ಮೂಲದ ಸಾಗರ ಅಧ್ಯಯನ ಶಾಸ್ತ್ರ ರಾಷ್ಟ್ರೀಯ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ.

ಸಮುದ್ರ ತಳದ ಮಾದರಿಗಳನ್ನು ಸಂಗ್ರಹಿಸಲು ಜ.23ರಂದು ಬಾರನ್ ಜ್ವಾಲಾಮುಖಿ ಸಮೀಪಕ್ಕೆ ಹೋಗಿದ್ದಾಗ ದಿಢೀರನೆ ಜ್ವಾಲಾಮುಖಿಯಿಂದ ಬೂದಿ ಏಳಲು ಆರಂಭಿಸಿತು. ಬಳಿಕ ಒಂದು ಮೈಲು ದೂರ ಹೋಗಿ, ಸೂಕ್ಷ್ಮವಾಗಿ ಗಮನಿಸಿದಾಗ ಐದರಿಂದ ಹತ್ತು ನಿಮಿಷ ಬೂದಿ ಬರುತ್ತಲೇ ಇತ್ತು. ಹಗಲಿನ ಹೊತ್ತು ಬೂದಿ ಕಾಣಿಸಿಕೊಂಡರೆ, ರಾತ್ರಿ ಹೊತ್ತು ಕೆಂಪು ಬಣ್ಣದ ಲಾವಾರಸ ಹೊರಬರುತ್ತಿತ್ತು ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.