ಬೆಂಗಳೂರು(ಅ. 28): ಪ್ರಚಾರದ ಹಂಗಿಲ್ಲದೆ ಕಾಯಕ ಯೋಗಿಗಳಂತೆ ತೆರೆಮರೆಯಲ್ಲೇ ಸಮಾಜ ಸೇವೆ ಮಾಡುತ್ತಾ ಬಂದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾಯಕವನ್ನು ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಕಳೆದ 2 ವರ್ಷಗಳಿಂದ  ಮಾಡುತ್ತಾ ಬಂದಿದೆ. ಕಳೆದ ಬಾರಿಯಂತೆ ಈ ವರ್ಷವೂ ಇಂತಹ 15 ಸಾಧಕರನ್ನು ಗುರುತಿಸಿ ಗೌರವಿಸಿದೆ.

ರಾಜ್ಯದ ವಿವಿಧೆಡೆ ಎಲೆಮರೆ ಕಾಯಿಯಂತೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಇವರನ್ನು ಪತ್ತೆಹಚ್ಚಿ ಹೆಕ್ಕಿ ತೆಗೆದು ಒಂದು ವೇದಿಕೆಗೆ ತಂದು ಸನ್ಮಾನ ಮಾಡಿದೆ. ಸನ್ಮಾನಕ್ಕೊಳಗಾದ 15 ಮಂದಿ ತಮ್ಮ ಊರು, ಪರಿಸರ, ನೆಲ ಜಲಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಕಾಯಕ ಯೋಗಿಗಳು. ಒಬ್ಬೊಬ್ಬರದೂ ಅವಿರತ ಹೋರಾಟದ ಬದುಕು. ತಮ್ಮ ವೈಯಕ್ತಿಕ ಜೀವನವನ್ನು ಮರೆತು ಸಮಾಜಕ್ಕಾಗಿ ಸುಖ ಜೀವನವನ್ನೇ ತ್ಯಾಗ ಮಾಡಿದ ಸತ್ಪುರಷರು. ಇಂತಹವರನ್ನು ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಒಂದೇ ವೇದಿಕೆಗೆ ಕರೆತಂದು ಸತ್ಕರಿಸಿದೆ.

ರಾಜಕಾರಣಿಗಳು, ಸಿನಿಮಾ ಮಾಧ್ಯಮದವರು, ಸಾಹಿತಿಗಳು, ಹೋರಾಟಗಾರರು ಹಾಗೂ ಕಾರ್ಯಕ್ರಮ ಆಯೋಜಿಸಿದ ಪ್ರಾಯೋಜಕರು ನಿಸ್ವಾರ್ಥ ಸೇವಕರಿಗೆ 25 ಸಾವಿರ ನಗದು ಪ್ರಶಸ್ತಿ ಫಲಕ ನೀಡಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸನ್ಮಾನಿಸಿ ವೇದಿಕೆಯನ್ನು ಕಳೆಗಟ್ಟುವಂತೆ ಮಾಡಿದರು.

ಅವರಲ್ಲಿ ಕೇಂದ್ರ ಯೋಜನಾ ಮತ್ತು ಅಂಕಿಅಂಶ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಏಷ್ಯಾನೆಟ್ ಸುದ್ದಿ ಸಮೂಹದ ಸಿಇಓ ಕೌಶಿಕ್ ಘೋಷ್, ಸುವರ್ಣನ್ಯೂಸ್ ಸುದ್ದಿ ವಿಭಾಗದ ಮುಖ್ಯಸ್ಥರಾದ ಅಜಿತ್ ಹನುಮಕ್ಕನವರ್, ನಿರ್ಮಾಪಕ, ಕನ್ನಡ ಚಳವಳಿ ಹೋರಾಟಗಾರ ಸಾ.ರಾ. ಗೋವಿಂದು, ಮೇಲ್ಮನೆ ಸದಸ್ಯೆ ತಾರಾ, ಸಿನಿಮಾ ನಿರ್ದೇಶಕಿ ಸುಮನಾ ಕಿತ್ತೂರು, ಸಂಗೀತ ನಿರ್ದೇಶಕ ರಘು ದೀಕ್ಷಿತ್, ಚಿತ್ರ ತಾರೆಯರಾದ ನೆನಪಿರಲಿ ಪ್ರೇಮ್, ಮುರಳಿ,ನೀನಾಸಂ ಸತೀಶ್, ರಾಗಿಣಿ, ಸಂಜನಾ, ತಿಥಿ ಚಿತ್ರದ ಸಂಚುರಿ ಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಸಾಧಕರೊಂದಿಗಿನ ಹಳೆಯ ನೆನಪುಗಳನ್ನು ನೆನೆದ ಸಚಿವರು

ಸಾಧಕರನ್ನು ಸತ್ಕರಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಮಂಡ್ಯದ

  • ಪ್ರೇಮಿ ಅಂಕೇಗೌಡರನ್ನು ನೆನೆದು ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಂಕೇಗೌಡರಿಗೆ ಬೃಹತ್ ಪುಸ್ತಕ ಸಂಗ್ರಹಾಲಯಕ್ಕೆ ಸರ್ಕಾರದಿಂದ ಆರ್ಥಿಕ ನೆರವು ನೀಡಿದ್ದಾಗಿ ತಿಳಿಸಿದರು. ಅಲ್ಲದೆ ಮಾಧ್ಯಮಗಳು ರಾಜಕಾರಣಿಗಳ ಹುಳುಕುಗಳನ್ನು ತೆಗೆಯುವುದರ ಜೊತೆ ಸಮಾಜಮುಖಿ ಕೆಲಸವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ದಿಟ್ಟ ಹೆಜ್ಜೆಯನ್ನಿಟಿದೆ ಎಂದು ತಿಳಿಸಿದರು.

ರಾಜ್ಯ ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ತಮ್ಮ ತವರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲನ ಹಳ್ಳಿಹಾರಕ ಬೆಳೆಗಾರರ ಸಂಘದ ಸದಸ್ಯರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.ಮಾಧ್ಯಮಗಳ ಒಳ್ಳೆಯ ಕೆಲಸಗಳಿಗೆ ರಾಜ್ಯ ಸರ್ಕಾರ ಸದಾ ನೆರವು ನೀಡುತ್ತದೆ ಎಂದು ತಿಳಿಸಿದರು.

 

ಸಾರ್ಥಕ ಸಾಧನೆ ಮೆರೆದವರು

ಆಧುನಿಕ ಭಗೀರಥ  ದೇವರಾಜ್​ ರೆಡ್ಡಿ

ಚಿತ್ರದುರ್ಗ : ಬಯಲುಸೀಮೆಯ ಚಿತ್ರದುರ್ಗದಲ್ಲಿ ಬೇಸಿಗೆಯಲ್ಲೂ ನೀರನ್ನು ಪೂರೈಸಿಕೊಳ್ಳುವುದು ಹೇಗೆ ಎಂದು ರೈತರಿಗೆ ಹೇಳಿಕೊಟ್ಟ ಮಹಾನ್​ ವ್ಯಕ್ತಿ. ಮಳೆಗಾಲದಲ್ಲಿ ಇವರು ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಿಕೊಂಡರೆ ಬೇಸಿಗೆಯಲ್ಲೂ ನೀರನ್ನು ಬಳಕೆ ಮಾಡಬಹುದು.

ಶವ ಬಂಧು ದಾದಾಪೀರ್ ​                                                 

ದಾವಣಗೆರೆ   : ಕಳೆದ ಮೂವತ್ತು ವರ್ಷಗಳಿಂದ ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ನದಿಯಲ್ಲಿ ಬಿದ್ದು ಸತ್ತ ಶವಗಳನ್ನು ಮೇಲೆತ್ತಿ ಸೇವೆ ಸಲ್ಲಿಸುತ್ತಿರುವ ದಾದಾಪೀರ್ ಮತ್ತು ತಂಡ ಇಲ್ಲಿವರೆಗೆ ಸುಮಾರು ಆರು ಸಾವಿರ ಮೃತದೇಹಗಳನ್ನು ಹೊರೆ ತೆಗೆದಿದೆ.

ಪರಿಸರ ಪ್ರೇಮಿ  ಶಿವಾನಂದ ಕಳವೆ    

ಶಿರಸಿ: ಅಸಾಮಾನ್ಯ ಪರಿಸರ ಕಾಳಜಿಯಿರುವ, ಕಳೆದ ಎರಡು ದಶಕಗಳಿಂದ ಚಿತ್ರಲೇಖನ, ಅಂಕಣ, ಭಾಷಣ, ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ, ಮುಂತಾದ  ಹತ್ತು ಹಲವು ರೀತಿಗಳ ಮೂಲಕ  ಜಲ-ಅರಣ್ಯ-ಪರಿಸರ ಸಂರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪರೂಪದ ವ್ಯಕ್ತಿ ಕಳವೆಯವರು.

ಕನ್ನಡದ ಕಬೀರ ಇಬ್ರಾಹಿಂ ಸುತಾರಾ

ಬಾಗಲಕೋಟೆ: ಗೀತೆ, ವೇದಾಂತದಂಥ ಗಟ್ಟಿ ವಿಷಯಗಳನ್ನು ಸರಳೀಕರಿಸಿ ಜನರಿಗೂ ಆ ಗಟ್ಟಿ ಸತ್ವ ತಲುಪುವಂತೆ ಮಾಡಿದ ಅಪರೂಪದ ವ್ಯಕ್ತಿತ್ವ ಇವರದ್ದು.

ಮಾದರಿ ಶಿಕ್ಷಕ ಖೂಬಾ ನಾಯಕ್​                                        

ಶಿವಮೊಗ್ಗ: ಒಬ್ಬ ಸರ್ಕಾರಿ ಮುಖ್ಯ ಶಿಕ್ಷಕ, ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿ, ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭಿಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಿಸುವಂತೆ ಮಾಡಿದ ಅಸಾಮಾನ್ಯ ಕನ್ನಡಿಗ ಖೂಬಾ ನಾಯ್ಕ್​.

ವನ್ಯಜೀವಿ ಸಂರಕ್ಷಕ ಸಮದ್​ ಕೊಟ್ಟೂರು

ಬಳ್ಳಾರಿ : ಗಣಿನಾಡಿನಲ್ಲಿ ಕರಡಿಧಾಮ ಹಾಗೂ ಪಕ್ಷಿಧಾಮಗಳ ಸ್ಥಾಪನೆಯ ರೂವಾರಿ; ವನ್ಯಜೀವಿಗಳ ರಕ್ಷಣೆಗೆ ತನ್ನ ಜೀವನವನ್ನೇ ಮುಡುಪಾಗಿಟ್ಟಿರುವ ಸಮದ್​ರವರ ಸಾಧನೆ ಅಸಾಮಾನ್ಯ.

ತೂಗು ಸೇತುವೆ ಸರದಾರ ಗಿರೀಶ್​ ಭಾರದ್ವಾಜ್ 

ಮಂಗಳೂರು: ಕುಗ್ರಾಮದಲ್ಲಿ ಹುಟ್ಟಿ, ತೂಗು ಸೇತುವೆ ಮೂಲಕ ಹಳ್ಳಿಗಳ ನಡುವೆ ಬಾಂಧವ್ಯದ ಸೇತು ಬೆಸೆದು ಮನೆ-ಮನಗಳನ್ನು ಜೋಡಿಸಿದವರು ಗಿರೀಶ್​. ತಮ್ಮ ಸ್ವಂತ ಖರ್ಚಿನಿಂದಲೇ ಅನೇಕ ಸೇತುವೆಗಳನ್ನು ನಿರ್ಮಿಸಿದ ಗಿರೀಶ್, ಇದುವರೆಗೆ 127 ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ.

ರೈತರಿಗೆ ಶಕ್ತಿ ಅನಿತಾ ರೆಡ್ಡಿ                                       

ಆನೇಕಲ್: ಭೂಮಿಗೆ ಚಿಕಿತ್ಸೆ ನೀಡಿ, ರೈತರಲ್ಲಿ  ಸ್ಫೂರ್ತಿ ತುಂಬಿ, ಬೆಂಗಾಡನ್ನು ಬಂಗಾರವಾಗಿಸಿದ ಹೆಣ್ಣು ಅನಿತಾ ರೆಡ್ಡಿ.  ಸ್ವಸಹಾಯ ಸಂಘ ಕಟ್ಟಿ, ರೈತರನ್ನೇ ಒಗ್ಗೂಡಿಸಿ, ಸಾವಯವ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿರುವ ಅಸಾಮಾನ್ಯ ಸಾಧಕಿ.

ರೈತನ ಮಿತ್ರ ಧರ್ಮರೆಡ್ಡಿ                                

ಧಾರವಾಡ: ಉದ್ಯೋಗ ಬಿಟ್ಟು ತನ್ನ ಪುಟ್ಟ ಹಳ್ಳಿಗೆ ವಾಪಾಸು ಬಂದು, ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನದಲ್ಲಿ ನೂರಾರು ಯಂತ್ರಗಳನ್ನು ಅವಿಷ್ಕರಿಸಿ, ತಯಾರಿಸಿ, ಅತ್ಯಂತ ಕಡಿಮೆ ಬೆಲೆಯಲ್ಲಿ, ಲಾಭದ ನಿರೀಕ್ಷೆ ಇಲ್ಲದೇ ರೈತರಿಗೆ ಮಾರಾಟ ಮಾಡುವ ದೇಸಿ ವಿಜ್ಞಾನಿ.

ಯುವ ವಿಜ್ಞಾನಿ ಸೈಯದ್​ ಗನಿ ಖಾನ್ 

ಮಂಡ್ಯ: 1996ರಿಂದ ಬೀಜ ಸಂಗ್ರಹ ಕಾರ್ಯದಲ್ಲಿ ನಿರತರಾಗಿರುವ ಸೈಯದ್ ನಿಜವಾದ ವಿಜ್ಞಾನಿ. ಇವರಿಗಿರುವಷ್ಟು ಕೃಷಿ ಜ್ಞಾನ ಬಹುಷ: ವಿಜ್ಞಾನಿಗೂ ಇಲ್ಲ. ಈ ಯುವ ವಿಜ್ಞಾನಿಯ ವಿಶೇಷತೆಯೇನೆಂದರೆ ತಮ್ಮ ಜ್ಞಾನವನ್ನು ಇತರರಿಗೂ ಹಂಚುತ್ತಾರೆ.

ಪುಸ್ತಕ ಪ್ರೇಮಿ ಅಂಕೇಗೌಡ  

ಮಂಡ್ಯ: ಸುಮಾರು  10 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿ ಪುಸ್ತಕ ಪ್ರಪಂಚವನ್ನು ನಿರ್ಮಿಸಿರುವ  ಅಪರೂಪದ ಪುಸ್ತಕ ಪ್ರೇಮಿ ಅಂಕೆಗೌಡ. ಇವರ ಬೃಹತ್ ಪುಸ್ತಕ ಸಂಗ್ರಹಾಲಯದಲ್ಲಿ ಯಾವ ಪುಸ್ತಕ ಬೇಕಿದ್ದರೂ ಲಭ್ಯ.

ಮಹಾಗುರು ಚಕ್ರವರ್ತಿ ಶ್ರೀಧರ್

ಮೈಸೂರು: ತಮ್ಮ ದುಡಿಮೆಯ ಮುಕ್ಕಾಲು ಪಾಲನ್ನು ಬಡ ಪ್ರತಿಭಾವಂತ ಮಕ್ಕಳಿಗೆ ಮುಡುಪಾಗಿಟ್ಟು,  ತಮ್ಮ ಶಿಷ್ಯರನ್ನು ತಮ್ಮಂತೆಯೇ ಬೆಳೆಸಿ, ಅವರೂ ಕೂಡಾ ವಿದ್ಯಾದಾನದ ಕೈಂಕರ್ಯದಲ್ಲಿ ಕೈಜೋಡಿಸುವಂತೆ ಮಾಡಿದ್ದು ಈ ಮಹಾಗುರುವಿನ ಸಾಧನೆ.

ಗೋವುಗಳ ರಕ್ಷಕ ಕೃಷ್ಣ ರಾಜು 

ಚಿಕ್ಕಮಂಗಳೂರು: ವೃತ್ತಿಯಲ್ಲಿ ಪಶುವೈದ್ಯ. ಪ್ರವೃತ್ತಿಯಲ್ಲಿ ಗೋರಕ್ಷಕ. ಆಧುನಿಕ-ಯುಗದಲ್ಲಿ ಗೋವುಗಳ ಸಾಕಣೆಯೇ ಕಡಿಮೆಯಾಗುತ್ತಿರುವ ಪರಿಸ್ಥಿತಿಯಲ್ಲಿ ಗೋವುಗಳ, ವಿಶೇಷವಾಗಿ ದೇಶಿ ತಳಿಗಳನ್ನು ಸಂರಕ್ಷಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ನಿಜವಾದ ಗೋರಕ್ಷಕ ಕೃಷ್ಣರಾಜು.

ಜಲಕ್ರಾಂತಿ ವಂಡರ್​ಫುಲ್ ವಿಲೇಜ್

ಕೋಲಾರ : ಕೋಲಾರ ಬರಡು ಪ್ರದೇಶ. ಫಸಲು ಬೆಳೆಯುವುದು ಬಿಡಿ, ಕುಡಿಯಲಿಕ್ಕೂ ನೀರಿಲ್ಲ. ಇಂಥ ಒಣ ಭೂಮಿಯಲ್ಲಿ ನೀರು ಸಂಗ್ರಹ ಮಾಡಿ, ನೀರಿನ ಸಮಸ್ಯೆ ಬಗೆಹರಿಸಿದ ‘ವಂಡರ್​ಫುಲ್ ವಿಲೇಜ್’ನ ಅಸಾಮಾನ್ಯ ಕನ್ನಡಿಗ ಸೋಮಶೇಖರ್

ಸಿರಿಧಾನ್ಯ ಸಂರಕ್ಷಕರು, ಹಾರಕ ಬೆಳೆಗಾರರ ಸಂಘ                      

ತುಮಕೂರು: ನಾಡಿನ ಸಾಂಪ್ರದಾಯಿಕ ಧಾನ್ಯಗಳ ಸಂರಕ್ಷಣೆಗೆ ಈ ಯುವಪಡೆ ತೊಟ್ಟ ಪಣ ಈಗ ಆಂದೋಲನವಾಗಿ ಹೊರಹೊಮ್ಮಿದೆ. ಅಳಿವಿನಂಚಿನಲ್ಲಿದ್ದ ಸಾಂಪ್ರದಾಯಿಕ ಸಿರಿ ಧಾನ್ಯಗಳ ಸಂರಕ್ಷಣೆ ಹಾಗೂ ನಾಡಿನ ಜನರ ಆರೋಗ್ಯದ ಮೇಲೆ ಇವರಿಗಿರುವ ಕಾಳಜಿಗೆ ಹ್ಯಾಟ್ಸ್ ಅಪ್ ಅನ್ನಲೇಬೇಕು.