ನವದೆಹಲಿ[ಜೂ. 18]  ಹೈದರಾಬಾದ್​ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಅಸಾದುದ್ದೀನ್​ ಓವೈಸಿ ಸಂಸದರಾಗಿ  ಪ್ರಮಾಣ ತೆಗೆದುಕೊಂಡರು. ಓವೈಸಿ ಪ್ರಮಾಣ ತೆಗೆದುಕೊಳ್ಳುವ ವೇಳೆ ಕೆಲ ಸಂಸದರು ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿದರು.  ಘೋಷಣೆ ಕೂಗುವ ವೇಳೆ ಓವೈಸಿ ಕೂಡ ತಮ್ಮ ಎರಡು ಕೈಗಳನ್ನು ಎತ್ತುವ ಮೂಲಕ ಘೋಷಣೆ ಕೂಗುವ ಸಂಸದರನ್ನು ಮತ್ತಷ್ಟು ಹುರಿದುಂಬಿಸಿದಂತೆ ಮಾಡಿದರು.

ಆಲ್​ ಇಂಡಿಯಾ ಮಜ್ಲಿಸ್​ ಇ ಇತ್ತೇಹದುಲ್​ ಮುಸ್ಲಿಮೀನ್​ (ಎಐಎಂಐಎಂ) ಮುಖ್ಯಸ್ಥ ಓವೈಸಿ ಪ್ರಮಾಣವಚನ ಸ್ವೀಕಾರಕ್ಕೆ ಸ್ಪೀಕರ್ ಸಮೀಪದ ವೇದಿಕೆ ಬಳಿಗೆ ಸದನದ ಮೆಟ್ಟಿಲು ಇಳಿದು ಬರುವಾಗ ಕೆಲ ಸಂಸದರು ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್​ ಎಂಬ ಘೋಷಣೆಗಳನ್ನು ಕೂಗಿದರು. ಎರಡು ಕೈಗಳನ್ನು ಬೀಸುತ್ತಾ ವೇದಿಕೆ ಬಳಿಗೆ ಬಂದ ಓವೈಸಿ ಜೈ ಭೀಮ್​, ತಕ್​ಬೀರ್ ಅಲ್ಲಾ ಹು ಅಕ್ಬರ್ ಎನ್ನುತ್ತ ಪ್ರಮಾಣ ತೆಗೆದುಕೊಂಡರು.

ನಂತರ ಸುದ್ದಿಸಂಸ್ಥೆಯೊಂದಕ್ಕೆ ಮಾತನಾಡಿ,  ಇಂಥಹ ಘಟನೆ ನಡೆಯಬೇಕಾಗಿತ್ತು. ಅದೇ ರೀತಿ ಅವರು ಸಂವಿಧಾನವನ್ನು ನೆನಪು ಮಾಡಿಕೊಳ್ಳಲಿ ಮತ್ತು ಬಿಹಾರದಲ್ಲಿ ಮಕ್ಕಳು ಸಾಯುತ್ತಿರುವುದನ್ನು ನೆನಪು ಮಾಡಿಕೊಳ್ಳಲಿ ಎಂದು ಹೇಳಿ ಹೊರಟರು.