ವಿಜಯವಾಡ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಇದೀಗ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಟೀಕಿಸಿದ್ದಾರೆ. 

ನರೇಂದ್ರ ಮೋದಿಗಿಂತ ಪ್ರಧಾನಿಯಾಗಲು ಅರವಿಂದ್ ಕೇಜ್ರಿವಾಲ್ 1000 ಪಟ್ಟು ಉತ್ತಮ ಎಂದು ಹೇಳಿದ್ದಾರೆ. ಕೇಜ್ರಿವಾಲ್ ತಾವು ಎಲ್ಲಿ ಪದವಿ ಪಡೆದಿದ್ದಾರೆ ಎನ್ನುವುದನ್ನು ಬಹಿರಂಗ ಮಾಡುತ್ತಾರೆ. ಆದರೆ ನರೇಂದ್ರ ಮೋದಿ  ಶೈಕ್ಷಣಿಕ ಅರ್ಹತೆ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದರು. 

ದಿಲ್ಲಿಯಲ್ಲಿ ಸಂಪೂರ್ಣ ಅಧಿಕಾರ ಇಲ್ಲದಿದ್ದರೂ ಕೂಡ ಗವರ್ನರ್ ಅಧೀನದಲ್ಲಿ ಕೇಜ್ರಿವಾಲ್ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ದಿಲ್ಲಿಯಲ್ಲಿ ಅತ್ಯಂತ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಸೂಕ್ತ ರೀತಿಯಲ್ಲಿ ಜನಸೇವೆ ಮಾಡುತ್ತಿದ್ದಾರೆ.  

ಬಿಜೆಪಿ ಆಡಳಿತದಲ್ಲಿ ದೇಶದ ಸಂಯುಕ್ತ ವ್ಯವಸ್ಥೆ ಹಾಳಾಗುತ್ತಿದೆ. ವಿವಿಧ ಸರ್ಕಾರಿ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಾವು ಅತ್ಯಂತ ಅಪಾಯದ ಸ್ಥಿತಿಯಲ್ಲಿದ್ದು, ಈ ವೇಳೆ ನಮ್ಮ ದೇಶವನ್ನು ನಾವು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. 

ಪ್ರಜಾಪ್ರಭುತ್ವ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದೆ.  ನಾವೆಲ್ಲರೂ ಒಂದಾಗದೇ ಇದ್ದಲ್ಲಿ, ನಮಗೆಲ್ಲಾ ಇದೇ ನಮಗೆ ಕೊನೆಯ ಚುನಾವಣೆ ಆಗಲಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.