Asianet Suvarna News Asianet Suvarna News

ಅಪರೂಪಕ್ಕೆ ಮೋದಿಯನ್ನು ಶ್ಲಾಘಿಸಿದ ಅರವಿಂದ್ ಕೇಜ್ರಿವಾಲ್

arvind kejriwal praises narendra modi on army surgical strike

ನವದೆಹಲಿ(ಅ. 03): ಪಾಕಿಸ್ತಾನದ ಭಯೋತ್ಪಾದನಾ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿ ಕ್ರಮವನ್ನು ಅರವಿಂದ್ ಕೇಜ್ರಿವಾಲ್ ಸ್ವಾಗತಿಸಿದ್ದಾರೆ. ಈ ವಿಚಾರದಲ್ಲಿ ತಾನು ನರೇಂದ್ರ ಮೋದಿಯವರ ದಿಟ್ಟ ನಿರ್ಧಾರವನ್ನು ಪ್ರಶಂಸಿಸ ಬಯಸುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

"ಹಲವು ವಿಚಾರಗಳಲ್ಲಿ ಪ್ರಧಾನಿಯೊಂದಿಗೆ ನಾವು ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ಸೇನಾ ಕಾರ್ಯಾಚರಣೆಯ ವಿಚಾರಣೆಯಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿಯವರಿಗೆ ಸಲ್ಯೂಟ್ ಮಾಡಬಯಸುತ್ತೇನೆ," ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಅಲ್ಲದೇ, ಸೇನೆಯ ಸರ್ಜಿಕಲ್ ಕಾರ್ಯಾಚರಣೆಯ ವಿಚಾರದಲ್ಲಿ ಪಾಕಿಸ್ತಾನ ಸೇನೆ ಸೃಷ್ಟಿಸುತ್ತಿರುವ ಸುಳ್ಳು ವದಂತಿಗಳನ್ನು ಬಯಲಿಗೆಳೆಯಬೇಕೆಂದು ತಾನು ಪ್ರಧಾನಿ ಮೋದಿಯವರನ್ನು ಕೇಳಿಕೊಳ್ಳುತ್ತೇನೆ ಎಂದೂ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ಕಳೆದ ಗುರುವಾರಂದು ರಾತ್ರೋರಾತ್ರಿ ಭಾರತೀಯ ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿರುವ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದರು. ಎಂಟು ಭಯೋತ್ಪಾದನಾ ಶಿಬಿರಗಳನ್ನು ಧ್ವಂಸ ಮಾಡಿದ್ದರು. ಬಹಳ ರಹಸ್ಯವಾಗಿ ಹಾಗೂ ಮಿಂಚಿನ ರೀತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 40 ಉಗ್ರರು ಹತರಾದ ವರದಿಯಾಗಿದೆ. ಆದರೆ, ತನ್ನ ನೆಲದಲ್ಲಿ ಇಂತಹ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ ಎಂದು ಪಾಕಿಸ್ತಾನ ವಾದ ಮಾಡುತ್ತಿದೆ. ಕಾರ್ಯಾಚರಣೆ ನಡೆಯಿತೆನ್ನಲಾದ ಸ್ಥಳಕ್ಕೆ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಕರೆದೊಯ್ದು ತನ್ನ ವಾದಕ್ಕೆ ಪುಷ್ಟಿ ನೀಡುವ ಪ್ರಯತ್ನವನ್ನೂ ಪಾಕ್ ಮಾಡುತ್ತಿದೆ.

Latest Videos
Follow Us:
Download App:
  • android
  • ios