ನವದೆಹಲಿ (ಸೆ.12): ಅರುಣಾಚಲ ಪ್ರದೇಶ ರಾಜ್ಯಪಾಲ ಜ್ಯೋತಿಪ್ರಸಾದ್ ರಾಜ್‌ಖೋವಾ ಅವರನ್ನು ವಜಾಗೊಳಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಮಣಿಪುರ ರಾಜ್ಯಪಾಲ ವಿ.ಷಣ್ಮುಗನಾಥನ್‌ರನ್ನು ಪ್ರಭಾರ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಕೇಂದ್ರ ಸರ್ಕಾರ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಿನಾಮೆ ಕೊಡುವಂತೆ ಸೂಚಿಸಿತ್ತು ಎಂದು ರಾಜ್‌ಖೋವಾ ಕೆಲ ದಿನಗಳ ಹಿಂದಷ್ಟೇ ಹೇಳಿಕೊಂಡಿದ್ದರು. ಇದಾದ ಬಳಿಕ ತಾವು ರಾಜಿನಾಮೆ ನೀಡುವುದಿಲ್ಲ. ಬೇಕಿದ್ದರೆ ರಾಷ್ಟ್ರಪತಿಗಳೇ ವಜಾ ಮಾಡಲಿ ಎಂದು ಹೇಳಿಕೆ ನೀಡಿದ್ದರು. ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಜ್ಯೋತಿಪ್ರಸಾದ್‌ರನ್ನು ಕಳೆದ ವರ್ಷದ ಜೂನ್‌ನಲ್ಲಿ ರಾಜ್ಯಪಾಲರ ಹುದ್ದೆಗೆ ನೇಮಕ ಮಾಡಲಾಗಿತ್ತು. ಅರುಣಾಚಲ ಪ್ರದೇಶದಲ್ಲಿ ನಬಂ ಟುಕಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಿನ್ನಮತದಿಂದ ಪತನದ ಅಂಚಿಗೆ ಬಂದಿದ್ದ ಸಂದರ್ಭದಲ್ಲಿ ಬಿಜೆಪಿ, ಭಿನ್ನಮತೀಯ ಶಾಸಕರ ನೆರವಿನಿಂದ ಸರ್ಕಾರ ರಚನೆ ಮಾಡಿತ್ತು. ಒಂದು ಹಂತದಲ್ಲಿ ರಾಷ್ಟ್ರಪತಿ ಆಳ್ವಿಕೆಯೂ ಜಾರಿಯಾಗಿತ್ತು. ಕಾಂಗ್ರೆಸ್ ನೇತೃತ್ವದ ಸರ್ಕಾರ ಪುನಸ್ಥಾಪಿಸುವ ವೇಳೆ ರಾಜ್ಯಪಾಲರು ನಿರ್ವಹಿಸಿದ ಕ್ರಮಕ್ಕೆ ಸುಪ್ರೀಂಕೋರ್ಟ್ ಕಟುವಾಗಿ ಆಕ್ಷೇಪಿಸಿತ್ತು.
