ನವದೆಹಲಿ(ಮೇ.29): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟಕ್ಕೆ ಸೇರಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ಮೋದಿ-2 ಸರ್ಕಾರದಲ್ಲಿ ತಮ್ಮ ನಸೀಬು ಪ್ರದರ್ಶಿಸಲು ಎಲ್ಲರೂ ಸಜ್ಜಾಗಿದ್ದಾರೆ.

ಆದರೆ ಮೋದಿ-1 ಸರ್ಕಾರದಲ್ಲಿ ವಿತ್ತ ಸಚಿವರಾಗಿ ದೇಶ-ವಿದೇಶಗಳ ಗಮನ ಸೆಳೆದಿದ್ದ ಅರುಣ್ ಜೇಟ್ಲಿ, ತಮಗೆ ಈ ಬಾರಿ ಯಾವುದೇ ಜವಾಬ್ದಾರಿ ಕೊಡದಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಖುದ್ದು ಮೋದಿ ಅವರಿಗೆ ಪತ್ರ ಬರೆದಿರುವ ಜೇಟ್ಲಿ, ಅನಾರೋಗ್ಯದ ಕಾರಣ ತಮಗೆ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನೀಡದಂತೆ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಕಳೆದ 18 ತಿಂಗಳಿಂದ ತಾವು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಸಮಯದಲ್ಲಿ ತಮಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಜೇಟ್ಲಿ ಪತ್ರದಲ್ಲಿ ಮನವಿ ಮಾಡಿದ್ದಾರೆ.