ಕೇರಳದಲ್ಲಿ ಶಂಕಿತ ಸಿಪಿಎಂ ಕಾರ್ಯಕರ್ತರಿಂದ ಹತ್ಯೆಗೊಂಡ ಆರ್’ಎಸ್’ಎಸ್ ಕಾರ್ಯಕರ್ತ ಇ.ರಾಜೇಶ್ ಮನೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಭೇಟಿ ನೀಡಿದ್ದಾರೆ. ಇದೊಂದು ಕ್ರೂರ ಹಾಗೂ ಅನಾಗರೀಕ ಘಟನೆ ಎಂದು ಖಂಡಿಸಿದ್ದಾರೆ.
ತಿರುವನಂತಪುರಂ (ಆ.06): ಕೇರಳದಲ್ಲಿ ಶಂಕಿತ ಸಿಪಿಎಂ ಕಾರ್ಯಕರ್ತರಿಂದ ಹತ್ಯೆಗೊಂಡ ಆರ್’ಎಸ್’ಎಸ್ ಕಾರ್ಯಕರ್ತ ಇ.ರಾಜೇಶ್ ಮನೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಭೇಟಿ ನೀಡಿದ್ದಾರೆ. ಇದೊಂದು ಕ್ರೂರ ಹಾಗೂ ಅನಾಗರೀಕ ಘಟನೆ ಎಂದು ಖಂಡಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನಾಮ್ ರಾಜಶೇಖರನ್ ಜೊತೆ ಅರುಣ್ ಜೇಟ್ಲಿ ರಾಜೇಶ್ ಮನೆಗೆ ತೆರಳಿ ಅವರ 3 ವರ್ಷದ ಮಗ ಹಾಗೂ ಕುಟುಂಬದವರನ್ನು ಭೇಟಿ ಮಾಡಿದರು.
ಹತ್ಯೆಯಾದ ರಾಜೇಶ್ ದೇಹದಲ್ಲಿ 80 ಗಾಯಗಳಿದ್ದವು. ಇಂತಹ ಅಮಾನವೀಯ ಘಟನೆಯನ್ನು ನಾವು ಮರೆಯುವುದಿಲ್ಲ. ನಮ್ಮ ಶತ್ರು ದೇಶವು ಈ ರೀತಿ ಕ್ರೂರವಾಗಿ ವರ್ತಿಸುತ್ತಿರಲಿಲ್ಲವೇನೋ ಆದರೆ ರಾಜಕೀಯ ಪಕ್ಷ ರೀತಿ ವರ್ತಿಸಿದೆ. ನಮ್ಮ ಪಕ್ಷ ಒಗ್ಗಟ್ಟಾಗಿದೆ. ಕೇರಳದ ಬಿಜೆಪಿ ಕಾರ್ಯಕರ್ತರು ಒಬ್ಬಂಟಿಗರಲ್ಲ. ನಿಮ್ಮ ಜೊತೆ ಇಡೀ ದೇಶವೇ ಇದೆ ಎಂದು ಜೇಟ್ಲಿ ರಾಜೇಶ್ ನಿವಾಸದಲ್ಲಿ ಹೇಳಿದ್ದಾರೆ.
ಕೇರಳದಲ್ಲಿ ಸರಣಿ ಹಿಂಸಾಚಾರಗಳು, ಹತ್ಯೆಗಳು ನಡೆಯುತ್ತಿದ್ದರೂ ಸಂಪೂರ್ಣ ಮೌನ ವಹಿಸಿದ ಪಿನರಾಯಿ ವಿಜಯನ್ ನೇತೃತ್ವದ ಸರ್ಕಾರದ ನಡೆಯನ್ನು ಜೇಟ್ಲಿ ಪ್ರಶ್ನಿಸಿದ್ದಾರೆ. ಇಂತಹ ಅಮಾನವೀಯ ಘಟನೆಯನ್ನು ಬೇರೆ ಯಾವುದೇ ರಾಜಕೀಯ ಪಕ್ಷಗಳು ಮಾಡಿದ್ದರೆ ಪ್ರತಿಕ್ರಿಯೆ ಕೊಡುತ್ತಿದ್ದವರು ಈಗ್ಯಾಕೆ ಮೌನ ತಾಳಿದ್ದಾರೆ ಎಂದು ತೀವ್ರವಾಗಿ ಖಂಡಿಸಿದ್ಧಾರೆ.
