ನವದೆಹಲಿ[ಆ.19]: ತೀವ್ರ ಅನಾರೋಗ್ಯದಿಂದ ಇಲ್ಲಿನ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಮಾಜಿ ವಿತ್ತ ಸಚಿವ ಅರುಣ್‌ ಜೇಟ್ಲಿ (66) ಆರೋಗ್ಯ ಸ್ಥಿತಿ ಭಾನುವಾರ ಮತ್ತಷ್ಟುಬಿಗಡಾಯಿಸಿದೆ. ಭಾನುವಾರ ಮಧ್ಯಾಹ್ನದ ಬಳಿಕ ಜೇಟ್ಲಿ ಅವರ ಹೃದಯ ಮತ್ತು ಶ್ವಾಸಕೋಶಗಳಿಗೆ ಆಮ್ಲಜನಕ ಪೂರೈಕೆ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ, ಅವರಿಗೆ ಎಕ್ಸಾಕಾರ್ಪೋರಿಯಲ್‌ ಮೆಂಬ್ರೇನ್‌ ಆಕ್ಸೀಜಿನೇಷನ್‌ ವ್ಯವಸ್ಥೆಯ ಮೂಲಕ ಅಗತ್ಯ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಇದು ಅವರ ಆರೋಗ್ಯ ಮತ್ತಷ್ಟುಕ್ಷೀಣಿಸುವುದು ಸುಳಿವು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌, ಹರ್ಷವರ್ಧನ್‌, ಸ್ಮೃತಿ ಇರಾನಿ, ಜಿತೇಂದ್ರಸಿಂಗ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೇರಿದಂತೆ ಹಲವು ಗಣ್ಯರು ಏಮ್ಸ್‌ಗೆ ಭೇಟಿ ಕೊಟ್ಟು ಆರೋಗ್ಯ ಪರಿಸ್ಥಿತಿ ವಿಚಾರಿಸಿದರು.

ಆ. 9 ರಂದು ಉಸಿರಾಟದ ತೊಂದರೆಯಿಂದ ಏಮ್ಸ್‌ಗೆ ದಾಖಲಾಗಿದ್ದ ಜೇಟ್ಲಿ ಆರೋಗ್ಯದ ಬಗ್ಗೆ ಆ.10 ರಂದು ಏಮ್ಸ್‌ ವೈದ್ಯಕೀಯ ಪ್ರಕಟಣೆ ಹೊರಡಿಸಿತ್ತು. ಬಳಿಕ ಆಸ್ಪತ್ರೆಯಿಂದ ಅಧಿಕೃತವಾಗಿ ಆರೋಗ್ಯದ ಕುರಿತ ಯಾವುದೇ ಮಾಹಿತಿ ಬಿಡುಗಡೆಯಾಗಿಲ್ಲ.