ಹೈದರಾಬಾದ್‌[ಏ.17]: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡುವ ಸಂವಿಧಾನದ 370 ಹಾಗೂ 35ಎ ಪರಿಚ್ಛೇದಗಳನ್ನು ರದ್ದು ಮಾಡಲಾಗುವುದು ಎಂಬ ಬಿಜೆಪಿ ಪ್ರಣಾಳಿಕೆಯಲ್ಲಿನ ಅಂಶಗಳಿಗೆ ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಪರಿಚ್ಛೇದಗಳು ಇತರ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಯ ಜತೆಗೆ ಮಾತನಾಡಿದ ಅವರು, ‘ಕಾಶ್ಮೀರವನ್ನು 1948ರಲ್ಲಿ ಮಹಾರಾಜರು ಭಾರತದಲ್ಲಿ ವಿಲೀನಗೊಳಿಸಲು ಒಪ್ಪಿದರು. ಆಗ ಅವರ ಬೇಡಿಕೆಯ ಅನುಸಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಪರಿಚ್ಛೇದ 35ಎ ಹಾಗೂ ಪರಿಚ್ಛೇದ 370ಗಳನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಹಾಗಂತ ಇವು ‘ಶಾಶ್ವತ ಪರಿಚ್ಛೇದ’ಗಳಲ್ಲ. ಅಂದು ನೀಡಿದ್ದ ಸ್ಥಾನಮಾನದ ಉದ್ದೇಶಗಳು ಈಡೇರಿವೆ. ಹೀಗಾಗಿ ‘ಇಂದಿನ ಪರಿಸ್ಥಿತಿ’ಗೆ ಅನುಗುಣವಾಗಿ ಈ ಪರಿಚ್ಛೇದಗಳು ರದ್ದಾಗಬೇಕು’ ಎಂದು ಪ್ರತಿಪಾದಿಸಿದರು.

‘ಕಾಶ್ಮೀರವು ಭಾರತಕ್ಕೆ ಸೇರಿ 70 ವರ್ಷಗಳು ಉರುಳಿವೆ. ಅಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೇ ಆಗಿದ್ದರೆ ಅದಕ್ಕೆ ವಿಶೇಷ ಸ್ಥಾನಮಾನ ಮುಂದುವರಿಕೆಯ ಅಗತ್ಯವಿಲ್ಲ. ಅದೂ ಕೂಡ ಇತರ ರಾಜ್ಯಗಳಂತೆ ಸಮಾನ ಹಕ್ಕು ಹೊಂದಿರಬೇಕು. ಏಕೆಂದರೆ ಇತರ ರಾಜ್ಯಗಳ ಹಕ್ಕು/ಅಧಿಕಾರಗಳನ್ನು ವಿಶೇಷ ಸ್ಥಾನಮಾನವು ಕಸಿದುಕೊಳ್ಳುತ್ತದೆ’ ಎಂದು ನ್ಯಾ

ಹೆಗ್ಡೆ ಸೂಚ್ಯವಾಗಿ ಹೇಳಿದರು.

ಇದೇ ವೇಳೆ, ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಕೆಳಮಟ್ಟಕ್ಕೆ ಇಳಿದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.