ಅರಸೀಕೆರೆ[ಮೇ.06]: ಇತ್ತೀಚೆಗೆ ಅರಸೀಕೆರೆ ತಾಲೂಕಿನ ಬಾಗೇಶಪುರದ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಪೌರಾಣಿಕ ನಾಟಕದ ಉದ್ಘಾಟನೆಗೆ ತೆರಳಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡರು ಗದೆಯನ್ನಿಡಿದು, ಸ್ವತಃ ಭೀಮನ ಪಾತ್ರದ ಡೈಲಾಗ್‌ಗಳನ್ನು ಹೊಡೆಯುವ ಮೂಲಕ ನೆರೆದಿದ್ದ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ನಾಟಕದ ಉದ್ಘಾಟನೆಗೆ ತೆರಳಿದ್ದ ಶಿವಲಿಂಗೇಗೌಡರಿಗೆ ಒಂದೆರಡು ಡೈಲಾಗ್‌ ಹೊಡೆಯುವಂತೆ ಅಭಿಮಾನಿಗಳು ಕೋರಿಕೊಂಡಿದ್ದು, ಇದರಿಂದ ಉತ್ತೇಜಿತರಾದ ಶಾಸಕರು ಗದೆಯನ್ನಿಡಿದು ಹರಳು ಉರಿದಂತೆ ಸರಾಗವಾಗಿ ನಾಟಕದ ಸಂಭಾಷಣೆಯನ್ನು ಹೇಳುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.

ಶಾಸಕರು ಹೀಗೆ ನಾಟಕದ ಡೈಲಾಗ್‌ಗಳನ್ನು ಹೊಡೆಯುವುದು ಇದೇ ಹೊಸತೇನಲ್ಲ. ಈ ಹಿಂದೆ ಹಲವು ಬಾರಿ ಈ ರೀತಿ ಸಂಭಾಷಣೆ ಹೇಳಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಇನ್ನು ಕಳೆದ 15 ವರ್ಷಗಳ ಹಿಂದೆ ಶಾಸಕರಾಗುವುದಕ್ಕೂ ಮುನ್ನ ಶಿವಲಿಂಗೇಗೌಡರು ಅರಸೀಕೆರೆಯ ಬಸವ ರಾಜೇಂದ್ರ ಹೈಸ್ಕೂಲ್‌ ಮೈದಾನದಲ್ಲಿ ನಡೆದಿದ್ದ ಮಹಾಭಾರತ ಪೌರಾಣಿಕ ನಾಟಕದಲ್ಲಿ ಭೀಮನ ಪಾತ್ರದಲ್ಲಿ ನಟಿಸಿದ್ದರು.